ADVERTISEMENT

ತಮಿಳುನಾಡು | ರಾಜ್ಯಪಾಲರು ಕರೆದಿದ್ದ ಸಮಾವೇಶ: ಬಹುತೇಕ ಕುಲಪತಿಗಳು ಗೈರು

ಪಿಟಿಐ
Published 25 ಏಪ್ರಿಲ್ 2025, 15:53 IST
Last Updated 25 ಏಪ್ರಿಲ್ 2025, 15:53 IST
ಆರ್‌.ಎನ್‌. ರವಿ
ಆರ್‌.ಎನ್‌. ರವಿ   

ಚೆನ್ನೈ: ತಮಿಳುನಾಡಿನ ರಾಜ್ಯಪಾಲ ಆರ್‌.ಎನ್‌. ರವಿ ಅವರು ಶುಕ್ರವಾರ ಕರೆದಿದ್ದ ಕುಲಪತಿಗಳ ವಾರ್ಷಿಕ ಸಮಾವೇಶಕ್ಕೆ ರಾಜ್ಯ– ಅನುದಾನಿತ ವಿಶ್ವವಿದ್ಯಾಲಯಗಳ ಬಹುತೇಕ ಕುಲಪತಿಗಳು ಗೈರಾಗುವ ಮೂಲಕ ‘ಬಹಿಷ್ಕರಿಸಿ’ದರು.

ಈ ಸಂಬಂಧ ಆಡಳಿತಾರೂಢ ಡಿಎಂಕೆ ಕಾರ್ಯವಿಧಾನವನ್ನು ತೀವ್ರವಾಗಿ ಟೀಕಿಸಿರುವ ರಾಜ್ಯಪಾಲ ರವಿ ಅವರು, ‘ಸರ್ಕಾರ ಪೊಲೀಸರನ್ನು ಬಳಸಿಕೊಂಡು ಕುಲಪತಿಗಳನ್ನು ಬೆದರಿಸಿದೆ. ಕುಲಪತಿಗಳ ಮನೆಗಳು ಮತ್ತು ಅವರು ಉಳಿದಿದ್ದ ಹೋಟೆಲ್‌ ಕೊಠಡಿಗಳ ಬಾಗಿಲುಗಳನ್ನು ಮಧ್ಯರಾತ್ರಿ ಬಡಿದು ಆತಂಕ ಸೃಸ್ಟಿಸಿದೆ’ ಎಂದು ವಾಗ್ದಾಳಿ ನಡೆಸಿದರು.

18 ಆಹ್ವಾನಿತರಷ್ಟೇ ಭಾಗಿ:

ಒಟ್ಟು 56 ಆಹ್ವಾನಿತರ ಪೈಕಿ 18 ಜನರು ಸಮಾವೇಶದಲ್ಲಿ ಭಾಗವಹಿಸಿದ್ದರು. ಹಾಜರಿದ್ದವರಲ್ಲಿ ಬಹುತೇಕರು ಕೇಂದ್ರ ಸರ್ಕಾರದ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು.

ADVERTISEMENT

ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸುವ ಮತ್ತು ತೆಗೆದು ಹಾಕುವ ಅಧಿಕಾರವನ್ನು ರಾಜ್ಯಪಾಲರಿಂದ ವಾಪಸ್‌ ಪಡೆಯುವ ಮಸೂದೆಗಳು, ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಕಾಯ್ದೆಯಾಗಿ ಜಾರಿಯಾಗಿವೆ. ಇದರ ಬೆನ್ನಲ್ಲೇ ರಾಜ್ಯಪಾಲರು ಕರೆದಿದ್ದ ಸಮಾವೇಶಕ್ಕೆ ಹೆಚ್ಚಿನ ಕುಲಪತಿಗಳು ಗೈರಾಗಿದ್ದಾರೆ. ಇದು ರಾಜ್ಯಪಾಲರಿಗಾದ ದೊಡ್ಡ ಮುಖಭಂಗ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ನೀಲಗಿರಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ನಾಲ್ಕನೇ ವರ್ಷದ ಕುಲಪತಿಗಳ ಸಮಾವೇಶವನ್ನು ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಉದ್ಘಾಟಿಸಿದರು.

‘ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ಏಪ್ರಿಲ್‌ 16ರಂದು ಭೇಟಿಯಾಗಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು, ರಾಜ್ಯಪಾಲರು ಕರೆದಿರುವ ಸಭೆಗೆ ಹೋಗದಂತೆ ಕುಲಪತಿಗಳನ್ನು ಪೊಲೀಸರ ಮೂಲಕ ಬೆದರಿಸಿದ್ದಾರೆ’ ಎಂದು ರಾಜ್ಯಪಾಲ ರವಿ ದೂರಿದರು.

‘ತುರ್ತು ಪರಿಸ್ಥಿತಿ ದಿನಗಳ ನೆನಪು’:

‘ಇದು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುತ್ತದೆ. ಕುಲಪತಿಗಳು ಸಮಾವೇಶದಲ್ಲಿ ಭಾಗವಹಿಸಿದಂತೆ ಮಾಡಲು ಉನ್ನತ ಶಿಕ್ಷಣ ಸಚಿವರು ದೂರವಾಣಿ ಮೂಲಕ ಬೆದರಿಸಿದ್ದು ಪ್ರಯೋಜನವಾಗಲಿಲ್ಲ ಎಂದು, ಮುಖ್ಯಮಂತ್ರಿ ಸ್ಟಾಲಿನ್‌ ಅವರು ಪೊಲೀಸರನ್ನು ಬಳಸಿಕೊಂಡಿದ್ದಾರೆ’ ಎಂದು ಕಿಡಿಕಾರಿದರು.

‘ಮಧ್ಯರಾತ್ರಿ ತಮ್ಮ ಮನೆಗಳ ಬಾಗಿಲುಗಳನ್ನು ಬಡಿದು ಹೆದರಿಸಲಾಗಿದೆ ಎಂದು ಕೆಲ ಕುಲಪತಿಗಳು ನನಗೆ ಪತ್ರ ಬರೆದು ತಿಳಿಸಿದ್ದಾರೆ. ನಾನು ಅವರಿಗೆ ನಿಮ್ಮ ಕುಟುಂಬಗಳ ಬಗ್ಗೆ ಕಾಳಜಿವಹಿಸುವಂತೆ ಹೇಳಿದ್ದೇನೆ’ ಎಂದು ರಾಜ್ಯಪಾಲರು ಹೇಳಿದರು.

ಶಿಕ್ಷಣ ಸಚಿವರ ತಿರುಗೇಟು:

ರಾಜ್ಯಪಾಲರ ಆರೋಪಗಳಿಗೆ ತಿರುಗೇಟು ನೀಡಿರುವ ಉನ್ನತ ಶಿಕ್ಷಣ ಸಚಿವ ಗೋವಿ ಚೆಝಿಯಾನ್, ‘ಸುಪ್ರೀಂ ಕೋರ್ಟ್‌ ತೀರ್ಪು ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅರಿವಿರುವ ಕುಲಪತಿಗಳು ರಾಜ್ಯಪಾಲರು ಕರೆದಿದ್ದ ಸಮಾವೇಶವನ್ನು ಬಹಿಷ್ಕರಿಸಿದ್ದಾರೆ. ಕಾನೂನುಗಳಿಗೆ ಕುಲಪತಿಗಳು ಗೌರವ ಕೊಡಬಾರದೇ?’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.