ADVERTISEMENT

‘ಸೇನಾ ಸಾಧನೆಗಳ ದುರ್ಬಳಕೆಗೆ ಕಡಿವಾಣ ಹಾಕಿ’

ರಾಷ್ಟ್ರಪತಿಗೆ ಮನವಿ; ವಿವಾದ ಸ್ವರೂಪ ಪಡೆದ ನಿವೃತ್ತ ಸೇನಾಧಿಕಾರಿಗಳ ಪತ್ರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 18:45 IST
Last Updated 12 ಏಪ್ರಿಲ್ 2019, 18:45 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ನವದೆಹಲಿ:‘ಚುನಾವಣಾ ಉದ್ದೇಶಕ್ಕೆ ಸೇನಾಪಡೆಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿ’ ಎಂದು 8 ನಿವೃತ್ತ ಸೇನಾ ಮುಖ್ಯಸ್ಥರೂ ಸೇರಿ 156 ನಿವೃತ್ತ ಸೇನಾಧಿಕಾರಿಗಳು ರಾಷ್ಟ್ರಪತಿಗೆ ಬರೆದಿದ್ದಾರೆ ಎನ್ನಲಾದ ಪತ್ರವು ಈಗ ವಿವಾದದ ಸ್ವರೂಪ ಪಡೆದಿದೆ.

ಅಂತಹ ಯಾವುದೇ ಪತ್ರ ನಮಗೆ ಬಂದಿಲ್ಲ ಎಂದು ರಾಷ್ಟ್ರಪತಿ ಭವನ ಹೇಳಿದೆ. ಪತ್ರದಲ್ಲಿ ಸಹಿ ಮಾಡಿದ್ದಾರೆ ಎನ್ನಲಾದ ನಿವೃತ್ತ ಸೇನಾ ಮುಖ್ಯಸ್ಥರಲ್ಲಿ ಕೆಲವರು ‘ತಾವು ಸಹಿ ಮಾಡಿಯೇ ಇಲ್ಲ’ ಎಂದು ಹೇಳಿದ್ದಾರೆ. ಮತ್ತೂ ಕೆಲವರು, ‘ನಾವು ಸಹಿ ಮಾಡಿದ್ದೇವೆ’ ಎಂದು ಒಪ್ಪಿಕೊಂಡಿದ್ದಾರೆ.

ಇದರ ಮಧ್ಯೆಯೇ ರಾಜಕೀಯ ಪಕ್ಷಗಳು ಪರಸ್ಪರ ಟೀಕೆ–ಪ್ರತಿಟೀಕೆಗೆ ಈ ಪತ್ರದ ವಿಚಾರವನ್ನು ಬಳಸಿಕೊಳ್ಳುತ್ತಿವೆ.

ADVERTISEMENT

ಯಾರು ಈ ಪತ್ರವನ್ನು ರಾಷ್ಟ್ರಪತಿ ಭವನಕ್ಕೆ ತಲುಪಿಸಿದ್ದಾರೆ ಮತ್ತು ಯಾವಾಗ ತಲುಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಪತ್ರದ ಪ್ರತಿಯು ಗುರುವಾರ ತಡರಾತ್ರಿ ಮಾಧ್ಯಮಗಳಿಗೆ ಲಭ್ಯವಾಗಿದೆ. ಪತ್ರದಲ್ಲಿ ದಿನಾಂಕವನ್ನು ಏಪ್ರಿಲ್‌ 11 (ಗುರುವಾರ) ಎಂದು ನಮೂದಿಸಲಾಗಿದೆ.ಈ ಪತ್ರವನ್ನು ಚುನಾವಣಾ ಆಯೋಗಕ್ಕೂ ತಲುಪಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಚುನಾವಣಾ ಆಯೋಗವು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ನಿವೃತ್ತ ಸೇನಾ ಮುಖ್ಯಸ್ಥರಾದ ಜನರಲ್ ಎಸ್‌.ಎಫ್‌.ರಾಡ್ರಿಗಸ್, ಜನರಲ್ ಶಂಕರ್ ರಾಯ್ ಚೌಧರಿ, ಜನರಲ್ ದೀಪಕ್ ಕಪೂರ್, ವಾಯುಪಡೆಯ ನಿವೃತ್ತ ಚೀಫ್ ಏರ್‌ ಮಾರ್ಷಲ್ ಎನ್‌.ಸಿ. ಸೂರಿ, ನೌಕಾಪಡೆಯ ನಿವೃತ್ತ ಚೀಫ್ ಅಡ್ಮಿರಲ್‌ಗಳಾದ ಎಲ್‌.ರಾಮದಾಸ್, ಅರುಣ್ ಪ್ರಕಾಶ್, ಮೆಹ್ತಾ, ವಿಷ್ಣು ಭಾಗವತ್ ಅವರ ಹೆಸರುಗಳು ಸಹಿ ಹಾಕಿದವರ ಪಟ್ಟಿಯಲ್ಲಿದೆ.

‘ಈ ಪತ್ರಕ್ಕೆ ನಾವು ಸಹಿ ಹಾಕಿಲ್ಲ’ ಎಂದು ನಿವೃತ್ತಜನರಲ್ ಎಸ್‌.ಎಫ್‌.ರಾಡ್ರಿಗಸ್, ನಿವೃತ್ತ ಏರ್‌ಚೀಫ್ ಮಾರ್ಷಲ್ ಎನ್‌.ಸಿ. ಸೂರಿ ಮತ್ತು ಪಟ್ಟಿಯಲ್ಲಿ ಹೆಸರಿಸಲಾಗಿರುವ ನಿವೃತ್ತ ಲೆಫ್ಟಿನೆಂಟ್ ಜನರಲ್ ಎಂ.ಎಲ್.ನಾಯ್ಡು ಹೇಳಿದ್ದಾರೆ.

ಆದರೆ ಸಹಿ ಹಾಕಿದವರ ಪಟ್ಟಿಯಲ್ಲಿ ಹೆಸರಿಸಲಾಗಿರುವ ನಿವೃತ್ತ ಮೇಜರ್ ಜನರಲ್ ಹರೀಶ್ ಕಕ್ಕರ್ ‘ನಾನು ಸಹಿ ಮಾಡಿದ್ದೇನೆ’ ಎಂದು ಒಪ್ಪಿಕೊಂಡಿದ್ದಾರೆ.

ಆಯೋಗಕ್ಕೆ ಪತ್ರ ಬರೆದಿದ್ದ ಎನ್‌.ಸಿ.ಸೂರಿ:ರಾಜಕೀಯ ಪಕ್ಷಗಳು ಚುನಾವಣೆ ಉದ್ದೇಶಕ್ಕೆ ಸೇನಾಪಡೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಆಕ್ಷೇಪಿಸಿನಿವೃತ್ತ ಚೀಫ್ ಏರ್‌ ಮಾರ್ಷಲ್ ಎನ್‌.ಸಿ. ಸೂರಿ ಅವರು ಈ ಹಿಂದೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಆಯೋಗವು ಸಕರಾತ್ಮಕವಾಗಿ ಸ್ಪಂದಿಸಿತ್ತು. ಸೇನಾಪಡೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿತ್ತು.ರಾಷ್ಟ್ರಪತಿಗೆ ಬರೆಯಲಾಗಿದೆ ಎನ್ನಲಾದ ಪತ್ರದಲ್ಲಿ ಇದರ ಬಗ್ಗೆಯೂ ಉಲ್ಲೇಖವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.