ADVERTISEMENT

ಲವ್ ಜಿಹಾದ್ ತಡೆಗೆ 'ಸನಾತನಿ ಸೇನಾ' ಸ್ಥಾಪಿಸಲು VHP ಧರ್ಮ ಸಂಸತ್ತಿನಲ್ಲಿ ನಿರ್ಧಾರ

ಸಂಜಯ್ ಪಾಂಡೆ, ಲಖನೌ
Published 4 ಮೇ 2025, 20:58 IST
Last Updated 4 ಮೇ 2025, 20:58 IST
VHP logo
VHP logo   

ಲಖನೌ: ವಿಶ್ವ ಹಿಂದೂ ಪರಿಷತ್ತು (ವಿಎಚ್‌ಪಿ) ಭಾನುವಾರ ಇಲ್ಲಿ ಆಯೋಜಿಸಿದ್ದ ಧರ್ಮ ಸಂಸತ್ತಿನಲ್ಲಿ ಭಾಗಿಯಾಗಿದ್ದ ಸ್ವಾಮೀಜಿಗಳು ‘ಲವ್ ಜಿಹಾದ್’ ತಡೆಯುವ ಉದ್ದೇಶದಿಂದ ‘ಸನಾತನಿ ಸೇನಾ’ ರೂಪಿಸಲು ತೀರ್ಮಾನಿಸಿದ್ದಾರೆ. ಅಲ್ಲದೆ, ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ‘ಸನಾತನ ಕವಚ’ ಹೆಸರಿನಲ್ಲಿ ಕಚೇರಿಗಳನ್ನು ಆರಂಭಿಸಲು ವಿಎಚ್‌ಪಿ ತೀರ್ಮಾನಿಸಿದೆ. ಈ ಕಚೇರಿಗಳನ್ನು ತೆರೆಯುತ್ತಿರುವ ಉದ್ದೇಶ, ಹಿಂದೂಗಳಿಗೆ ಮತ್ತು ದೇವಸ್ಥಾನಗಳಿಗೆ ‘ರಕ್ಷಣೆ ಒದಗಿಸುವುದು’ ಎಂದು ಅದು ಹೇಳಿದೆ.

ಹಿಂದೂಗಳು, ಸನಾತನ ಧರ್ಮ ಮತ್ತು ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಏಳು ನಿರ್ಣಯಗಳನ್ನು ಧರ್ಮ ಸಂಸತ್ತಿನಲ್ಲಿ ಕೈಗೊಳ್ಳಲಾಗಿದೆ ಎಂದು ಅಯೋಧ್ಯೆಯ ಹನುಮಗಢಿ ದೇವಸ್ಥಾನದ ಮಹಂತ ರಾಜು ದಾಸ್ ತಿಳಿಸಿದರು.

ADVERTISEMENT

ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ಈಚೆಗೆ ನಡೆದ ಹಿಂಸಾಚಾರವನ್ನು ಖಂಡಿಸಿ ಜೂನ್‌ನಿಂದ ದೇಶದಾದ್ಯಂತ ಸನಾತನ ಯಾತ್ರೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಯಾತ್ರೆಯು ಮುರ್ಶಿದಾಬಾದ್‌ನಿಂದಲೇ ಶುರುವಾಗಲಿದೆ.

ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬೃಜೇಶ್ ಪಾಠಕ್ ಕೂಡ ಧರ್ಮ ಸಂಸತ್ತಿನಲ್ಲಿ ಭಾಗಿಯಾಗಿದ್ದರು. ಕೆಲವು ತಿಂಗಳ ಹಿಂದೆ ಮಹಾ ಕುಂಭಮೇಳ ಆಯೋಜನೆ ಆಗಿದ್ದ ಸಂದರ್ಭದಲ್ಲಿಯೂ ಧರ್ಮ ಸಂಸತ್ ನಡೆದಿತ್ತು. ಆಗಲೂ ‘ಹಿಂದೂ ರಾಷ್ಟ್ರ’ ಕುರಿತ ಬೇಡಿಕೆಯನ್ನು ಮಂಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.