ADVERTISEMENT

ಉಪ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಆರಂಭ: ಅಭ್ಯರ್ಥಿ ಆಯ್ಕೆಗೆ ಕಸರತ್ತು ಶುರು

ಪಿಟಿಐ
Published 25 ಜುಲೈ 2025, 14:38 IST
Last Updated 25 ಜುಲೈ 2025, 14:38 IST
<div class="paragraphs"><p>ಸಂಸತ್ತು </p></div>

ಸಂಸತ್ತು

   

ನವದೆಹಲಿ: ಚುನಾವಣಾ ಆಯೋಗವು ಚುನಾವಣಾಧಿಕಾರಿಯನ್ನು ನೇಮಿಸುವ ಮೂಲಕ ಮುಂದಿನ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದಂತೆ, ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ಮೈತ್ರಿಕೂಟದಲ್ಲೂ ಚಟುವಟಿಕೆಗಳು ಗರಿಗೆದರಿವೆ. 

ಅಭ್ಯರ್ಥಿಯ ಆಯ್ಕೆಗೆ ಬಿಜೆಪಿ ಹೈಕಮಾಂಡ್‌ ಇನ್ನೂ ಚರ್ಚೆ ಆರಂಭಿಸಿಲ್ಲವಾದರೂ, ತೆರೆಮರೆಯಲ್ಲಿ ಕಸರತ್ತು ಶುರುವಾಗಿದೆ. ಬಿಜೆಪಿ ನಾಯಕತ್ವವು ಈ ಬಾರಿ ಪ್ರಯೋಗಕ್ಕೆ ಮುಂದಾಗುವ ಬದಲು ಅಭ್ಯರ್ಥಿಯ ಆಯ್ಕೆಗೆ ಸೈದ್ಧಾಂತಿಕ ಹಿನ್ನೆಲೆ ಮತ್ತು ಪಕ್ಷ ನಿಷ್ಠೆಗೆ ಆದ್ಯತೆ ನೀಡುವ ಸಾಧ್ಯತೆಯಿದೆ.

ADVERTISEMENT

2022ರಲ್ಲಿ ಪಕ್ಷವು ಪ್ರಯೋಗಕ್ಕೆ ಮುಂದಾಗಿ ಧನಕರ್‌ ಅವರನ್ನು ಅಭ್ಯರ್ಥಿಯನ್ನಾಗಿಸಿತ್ತು. ಜನತಾ ದಳದ ಸಂಸದರಾಗಿ 1991ರಲ್ಲಿ ರಾಜಕೀಯ ಜೀವನ ಆರಂಭಿಸಿದ್ದ ಧನಕರ್‌ ಆ ಬಳಿಕ ಕಾಂಗ್ರೆಸ್‌ ಸೇರಿದ್ದರು. ಅನಂತರ ಅವರು ಬಿಜೆಪಿ ಜತೆ ಗುರುತಿಸಿಕೊಂಡಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಿಜೆಪಿ ನಾಯಕತ್ವದ ಗಮನಸೆಳೆದ ಅವರು 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕಗೊಂಡರು. 2022ರಲ್ಲಿ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಧನಕರ್‌ ಅವರ ನೇರ ನುಡಿ ಮತ್ತು ಅಸಾಂಪ್ರದಾಯಿಕ ಶೈಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಇಷ್ಟವಾಗಲಿಲ್ಲ.

‘ಧನಕರ್ ಅವರ ಆಯ್ಕೆಗೆ ಅನುಸರಿಸಿದ್ದ ಹಾದಿಯನ್ನು ಈ ಬಾರಿ ಎನ್‌ಡಿಎ ಅನುಸರಿಸುವ ಸಾಧ್ಯತೆಯಿಲ್ಲ. ಅವರ ಉತ್ತರಾಧಿಕಾರಿ ಆಯ್ಕೆಗೆ ಸಾಂಪ್ರದಾಯಿಕ ಮಾರ್ಗದ ಮೊರೆ ಹೋಗಲಾಗುತ್ತದೆ’ ಎಂದು ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ಹಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯವರೇ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ಅವರ ಹೆಸರೂ ಮುಂಚೂಣಿಯಲ್ಲಿದೆ. ಜೆಡಿಯು ಸಂಸದರಾಗಿರುವ ಹರಿವಂಶ್ ಅವರು ಕಳೆದ ಏಳು ವರ್ಷಗಳಲ್ಲಿ ಸರ್ಕಾರದ ವಿಶ್ವಾಸ ಗಳಿಸಲು ಯಶಸ್ವಿಯಾಗಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಅಕ್ಟೋಬರ್-ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮುಂದಿನ ವರ್ಷ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂನಲ್ಲಿ ಚುನಾವಣೆ ನಡೆಯಲಿದೆ. ಉಪ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವೇಳೆ ಬಿಜೆಪಿ ಈ ಅಂಶಗಳನ್ನೂ ಗಮನದಲ್ಲಿಡಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.