ಜಗದೀಪ್ ಧನಕರ್, ನರೇಂದ್ರ ಮೋದಿ
(ಪಿಟಿಐ ಚಿತ್ರ)
ನವದೆಹಲಿ: ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆಗೆ ವಿರೋಧ ಪಕ್ಷದ ಅನೇಕ ನಾಯಕರು ಆಘಾತವನ್ನು ವ್ಯಕ್ತಪಡಿಸಿದ್ದಾರೆ.
ಧನಕರ್ ರಾಜೀನಾಮೆ ಸಂಬಂಧ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಮಾತ್ರ ವಿವರಿಸಲು ಸಾಧ್ಯ ಎಂದು ವಿಪಕ್ಷಗಳ ನಾಯಕರು ಹೇಳಿದ್ದಾರೆ.
'ಧನಕರ್ ರಾಜೀನಾಮೆಗೆ ಹಲವು ಕಾರಣಗಳು ಇರಬಹುದು. ಅದನ್ನು ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಂದ ಮಾತ್ರ ವಿವರಿಸಲು ಸಾಧ್ಯ. ಪ್ರಮುಖ ವಿಷಯವೆಂದರೆ ಅವರು ಆರೋಗ್ಯ ಕಾರಣಗಳಿಂದಾಗಿ ರಾಜೀನಾಮೆ ನೀಡಿಲ್ಲ' ಎಂದು ಸಿಪಿಐ ಸಂಸದ ಪಿ. ಸಂತೋಷ್ ಹೇಳಿದ್ದಾರೆ.
'ಸದನದಲ್ಲಿ ಅವರು (ಧನಕರ್) ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದರು. ರಾಜೀನಾಮೆಗೆ ಇನ್ನೂ ಹಲವಾರು ಕಾರಣಗಳು ಇರಬಹುದು' ಎಂದು ಅವರು ಹೇಳಿದ್ದಾರೆ.
'ನಾನು ಏನು ಹೇಳಲಿ, ಅವರು ಆರೋಗ್ಯ ಕಾರಣದಿಂದಾಗಿ ರಾಜೀನಾಮೆ ನೀಡಿದ್ದಾರೆ. ಆದರೆ ಅದಕ್ಕಿಂತ ಹೆಚ್ಚಿನದ್ದೇನೋ ಇದೆ ಎಂದಷ್ಟೇ ಹೇಳಬಲ್ಲೆ' ಎಂದು ಸಮಾಜವಾದಿ ಪಕ್ಷದ ನಾಯಕ ರಾಮಗೋಪಾಲ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ಆರಂಭವಾದ ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ಕಲಾಪದಲ್ಲಿ ಭಾಗಿಯಾಗಿದ್ದ ರಾಜ್ಯಸಭೆಯ ಸಭಾಪತಿಯೂ ಆಗಿರುವ ಧನಕರ್, ವೈದ್ಯಕೀಯ ಕಾರಣಗಳನ್ನು ನೀಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.