
ವಿಜಯ್ ಮಲ್ಯ
ಮುಂಬೈ: ಭಾರತಕ್ಕೆ ನೀವು ಯಾವಾಗ ಮರಳಲು ಬಯಸುತ್ತಿದ್ದೀರಿ? ಎಂದು ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಪ್ರಶ್ನಿಸಿರುವ ಬಾಂಬೆ ಹೈಕೋರ್ಟ್, ಖುದ್ದು ನ್ಯಾಯಾಲಯದ ವ್ಯಾಪ್ತಿಗೆ ಬರದ ಹೊರತು ನೀವು ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆ ಅಡಿ ವಿಚಾರಣೆ ವಿರೋಧಿಸಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸುವುದಿಲ್ಲ ಎಂದು ಹೇಳಿದೆ. ಅಲ್ಲದೆ, ಫೆಬ್ರುವರಿ 12ಕ್ಕೆ ವಿಚಾರಣೆ ಮುಂದೂಡಿದೆ.
2016ರಿಂದ ಬ್ರಿಟನ್‌ನಲ್ಲಿ ನೆಲೆಸಿರುವ ಮಲ್ಯ, ತಮ್ಮನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಿ ಮತ್ತು 2018ರ ದೇಶಭ್ರಷ್ಟ ಆರ್ಥಿಕ ಅಪರಾಧಿ ಕಾಯ್ದೆಯ(ಎಫ್ಇಒ) ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಸಂಬಂಧ ನೀವು ದೇಶಕ್ಕೆ ಹಿಂದಿರುಗಿದಾಗ ಮಾತ್ರ ಈ ಅರ್ಜಿಗಳ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.
ಮಲ್ಯ ಯಾವಾಗ ದೇಶಕ್ಕೆ ಬರುತ್ತಾರೆ ಎಂದು ಅವರ ಪರ ವಕೀಲರನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕದ್ ಅವರ ಪೀಠವು, ಅವರು ನ್ಯಾಯಾಲಯದ ವ್ಯಾಪ್ತಿಗೆ ಬರದ ಹೊರತು ಕಾಯ್ದೆಯ ವಿರುದ್ಧದ ಅರ್ಜಿಯನ್ನು ಆಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಜಾರಿ ನಿರ್ದೇಶನಾಲಯ (ಇಡಿ) ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೇಶದ ನ್ಯಾಯಾಲಯದ ವ್ಯಾಪ್ತಿಗೆ ಬರದ ಹೊರತು, ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಲು ದೇಶಭ್ರಷ್ಟನಿಗೆ ಅವಕಾಶ ನೀಡಬಾರದು ಎಂದು ವಾದಿಸಿದರು. ದೇಶಬಿಟ್ಟು ಪರಾರಿಯಾದವರು ವಕೀಲರನ್ನು ಬಳಸಿಕೊಂಡು ಕಾಯ್ದೆಯನ್ನೇ ಪ್ರಶ್ನಿಸುವ ಮೂಲಕ ಕಾನೂನು ದುರುಪಯೋಗ ಮಾಡಕೂಡದು ಎಂಬ ಕಾರಣಕ್ಕೇ ಎಫ್‌ಇಓ ಕಾಯ್ದೆ ಜಾರಿಗೆ ತರಲಾಗಿದ ಎಂದೂ ಅವರು ನ್ಯಾಯಾಲಯದ ಗಮನ ಸೆಳೆದರು.
ಮಲ್ಯ ಅವರ ಹಸ್ತಾಂತರ ಪ್ರಕ್ರಿಯೆ ಒಂದು ಹಂತಕ್ಕೆ ಬಂದಿದೆ. ಹೀಗಾಗಿ, ಈ ಸಂದರ್ಭ ಅವರ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಬಾರದು ಎಂದೂ ವಾದಿಸಿದರು.
ಮಲ್ಯ ಅವರ ₹14,000 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಅವರು ಮಾಡಿದ್ದ ಸಾಲ ತೀರಿದೆ ಎಂದು ಮಲ್ಯ ಪರ ಹಾಜರಿದ್ದ ವಕೀಲ ದೇಸಾಯಿ ನ್ಯಾಯಾಲಯಕ್ಕೆ ತಿಳಿಸಿದರು.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯವು 2019ರ ಜನವರಿಯಲ್ಲಿ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿತ್ತು. ಬಹುಕೋಟಿ ಸಾಲ ಪಡೆದು ಸುಸ್ಥಿದಾರನಾಗಿದ್ದ ಮತ್ತು ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿರುವ ಮಲ್ಯ 2016ರ ಮಾರ್ಚ್‌ನಲ್ಲಿ ಭಾರತವನ್ನು ತೊರೆದಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.