ತಿರುಚರಾಪಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ರ‍್ಯಾಲಿಯಲ್ಲಿ ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ, ನಟ ವಿಜಯ್ ಮಾತನಾಡಿದರು
–ಪಿಟಿಐ ಚಿತ್ರ
ತಿರುಚರಾಪಳ್ಳಿ (ತಮಿಳುನಾಡು): 2026ರ ವಿಧಾನಸಭಾ ಚುನಾವಣಾ ಪ್ರಚಾರ ಆರಂಭಿಸುವುದಕ್ಕೂ ಮುನ್ನವೇ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ನಟ ವಿಜಯ್ ಅವರಿಗೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶನಿವಾರ ಇಲ್ಲಿ ಅದ್ದೂರಿ ಸ್ವಾಗತ ನೀಡಿದರು.
ವಿಜಯ್ ಚೆನ್ನೈನಿಂದ ಚಾರ್ಟರ್ಡ್ ವಿಮಾನದಲ್ಲಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣ, ಪಕ್ಷದ ಧ್ವಜಗಳನ್ನು ಹಿಡಿದು ನಿಂತಿದ್ದ ಕಾರ್ಯಕರ್ತರು ಅಲ್ಲಿನ ಬ್ಯಾರಿಕೇಡ್‌ಗಳನ್ನು ತಳ್ಳಿ ತಮ್ಮ ನೆಚ್ಚಿನ ನಾಯಕನನ್ನು ನೋಡಲು ಮುಗಿಬಿದ್ದರು.
ಮಹಿಳೆಯರು ಸೇರಿದಂತೆ ಜನಸಾಗರವೇ ಹರಿದುಬರುತ್ತಿದ್ದಂತೆ ವಿಜಯ್ ಅವರ ಪ್ರಚಾರದ ವಾಹನ ನಿಧಾನಗತಿಯಲ್ಲಿ ಸಾಗಿತು. ವಿಜಯ್ ಬಸ್‌ನೊಳಗಿನಿಂದಲೇ ಕಾರ್ಯಕರ್ತರತ್ತ ಕೈಬೀಸಿದರು. ಅನೇಕರು ಪಕ್ಷದ ಧ್ವಜಗಳನ್ನು ಬೀಸಿದರು. ವಿಜಯ್ ಅವರ ಭಾವಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಸ್ವಾಗತ ಕೋರಿದರು.
ಜನಸಂದಣಿಯಿಂದಾಗಿ ವಿಜಯ್ ಅವರು ವಿಮಾನ ನಿಲ್ದಾಣದ ಆವರಣದಿಂದ ಹೊರ ಬರಲು ಒಂದು ಗಂಟೆ ತೆಗೆದುಕೊಂಡಿತು. ಅಲ್ಲಿಂದ ಆರು ಕಿ.ಮೀ. ದೂರವಿರುವ ಎಂಜಿಆರ್ ಪಾಯಿಂಟ್‌ಗೆ ತಲುಪಲು ನಾಲ್ಕು ಗಂಟೆ ಬೇಕಾಯಿತು. ಅವರನ್ನು ಸ್ವಾಗತಿಸುವ ಪ್ರಚಾರ ಸಾಮಗ್ರಿಗಳಲ್ಲಿ ‘ಟರ್ನಿಂಗ್ ಪಾಯಿಂಟ್’, ‘ಮುಖ್ಯಮಂತ್ರಿ’ ಎಂದು ಮುದ್ರಿಸಲಾಗಿತ್ತು.
ಪಕ್ಷದ ಪದಾಧಿಕಾರಿಗಳು ಹಾಗೂ ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ದ್ವಿಚಕ್ರವಾಹನ ಹಾಗೂ ಕಾರುಗಳಲ್ಲಿ ಆಗಮಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ಇದರಿಂದ, ಸಾರ್ವಜನಿಕರು ತೊಂದರೆ ಅನುಭವಿಸಿದರು.
ವಿಜಯ್ ಭಾಷಣವನ್ನು ಕೇಳಲು ಮಣಪ್ಪರೈ ಸೇರಿದಂತೆ ಸುತ್ತಲಿನ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಕೆಲವರು ಆಯಾಸಗೊಂಡು ಮೂರ್ಛೆ ಹೋಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.
ವಿಜಯ್ ಅವರು ಪ್ರಚಾರ ವಾಹನದಲ್ಲಿ ಭಾಷಣ ಮಾಡುವ ವೇಳೆ ಧ್ವನಿವರ್ಧಕ ಸಮಸ್ಯೆಯಾಯಿತು. 20 ನಿಮಿಷಗಳ ಭಾಷಣದಲ್ಲಿ ಒಂದು ಅಥವಾ ಎರಡು ನಿಮಿಷ ಮಾತ್ರ ಧ್ವನಿ ಸ್ಪಷ್ಟವಾಗಿ ಕೇಳಿಬಂದಿದೆ. ಕೆಲ ಮಾತು ಟೀಕೆ ಹಾಗೂ ಅಂಶಗಳನ್ನು ಹೊರತುಪಡಿಸಿ ಅವರ ಬಹುತೇಕ ಭಾಷಣ ಅರ್ಥವಾಗದ ಕಾರಣ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಅಭಿಮಾನಿಗಳು ‘ವಿಜಯ್ ವಿಜಯ್’ ಎಂದು ಕೂಗಿದರು.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅನೇಕ ಪ್ರಶ್ನೆಗಳನ್ನು ಎತ್ತಿದ ವಿಜಯ್ ‘ಡಿಎಂಕೆಗೆ ಮತ ಹಾಕುತ್ತೀರಾ’ ಎಂದು ಕೇಳಿದರು. 2021ರ ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ ಆಶ್ವಾಸನೆಗಳನ್ನು ಡಿಎಂಕೆ ಸರ್ಕಾರವು ಈಡೇರಿಸಿಲ್ಲ ಎಂಬುದು ಅವರ ಪ್ರಮುಖ ಆರೋಪವಾಗಿತ್ತು. ಮೂತ್ರಪಿಂಡಗಳ ಅಕ್ರಮ ಮಾರಾಟದ ಕುರಿತಂತೆ ಡಿಎಂಕೆ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು. ವಿಜಯ್ ಮಧ್ಯಾಹ್ನ 3 ಗಂಟೆಗೆ ಭಾಷಣ ಆರಂಭಿಸಿದಾಗ ತಮ್ಮ ಚೊಚ್ಚಲ ರ‍್ಯಾಲಿಯನ್ನು ತಿರುಚರಾಪಳ್ಳಿಯನ್ನೇ ಆಯ್ಕೆ ಮಾಡಿದ್ದರ ಕುರಿತು ವಿವರಿಸಿದರು.
‘ಡಿಎಂಕೆ ಸಂಸ್ಥಾಪಕ ಸಿ.ಎನ್.ಅಣ್ಣಾದೊರೈ ಅವರು 1956ರಲ್ಲಿ ಇಲ್ಲಿಂದಲೇ ಚುನಾವಣಾ ಕಣ ಪ್ರವೇಶಿಸಲು ನಿರ್ಧರಿಸಿದ್ದರು. ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ 1974ರಲ್ಲಿ ಮೊದಲ ರಾಜ್ಯಮಟ್ಟದ ಸಮಾವೇಶವನ್ನು ಇಲ್ಲಿಯೇ ಆಯೋಜಿಸಿದ್ದರು’ ಎಂದು ವಿಜಯ್ ಹೇಳಿದರು. ‘ತಿರುಚರಾಪಳ್ಳಿ ಕೋಮು ಸೌಹಾರ್ದಕ್ಕೆ ಹೆಸರಾಗಿತ್ತು. ವಿಚಾರವಾದಿ ನಾಯಕ ಪೆರಿಯಾರ್ ಇ.ವಿ. ರಾಮಸ್ವಾಮಿ ಇಲ್ಲಿಯೇ ವಾಸವಾಗಿದ್ದರು. ಹಿಂದಿನ ದಿನಗಳಲ್ಲಿ ರಾಜರು ಯುದ್ಧಭೂಮಿಗೆ ಹೋಗುವ ಮುನ್ನ ಕುಲದೇವರನ್ನು ಪ್ರಾರ್ಥಿಸುತ್ತಿದ್ದರು. ಅದೇ ರೀತಿ ನಾನು ತಿರುಚರಾಪಳ್ಳಿಗೆ ಭೇಟಿ ನೀಡಿದ್ದೇನೆ’ ಎಂದು ಹೇಳಿದರು.
‘ಯಾವುದೇ ರಾಜಕೀಯ ಹೋರಾಟ ತಿರುಚರಾಪಳ್ಳಿಯಲ್ಲಿ ಪ್ರಾರಂಭವಾದಾಗ ಅಂತಿಮವಾಗಿ ಅದು ಮಹತ್ವದ ತಿರುವು ಆಗುತ್ತದೆ’ ಎಂದರು. ‘ತಾಂತ್ರಿಕ ದೋಷದಿಂದ ಆಡಿಯೊ ಸಮಸ್ಯೆ ಉಂಟಾಗಿತ್ತು. ಮುಂದಿನ ದಿನಗಳಲ್ಲಿ ವಿಜಯ್ ಅವರ ಭಾಷಣವನ್ನು ಸ್ಪಷ್ಟವಾಗಿ ಆಲಿಸಬಹುದು’ ಎಂದು ಟಿವಿಕೆ ಪಕ್ಷ ಹೇಳಿದೆ.
‘ಡಿಎಂಕೆ ಎಂಬುದು ದೊಡ್ಡ ಮಟ್ಟದ ಸಭೆಗಳನ್ನು ಆಯೋಜಿಸಿ ಗದ್ದಲ ಉಂಟು ಮಾಡಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಚಳವಳಿಯಲ್ಲ. ಪಕ್ಷವು ರಾಜ್ಯದ ವಿಶಿಷ್ಟ ಅಸ್ಮಿತೆಯನ್ನು ಉಳಿಸಿ ಆಧುನಿಕ ತಮಿಳುನಾಡನ್ನು ನಿರ್ಮಿಸಿದೆ’ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ತಿರುಚರಾಪಳ್ಳಿಯಲ್ಲಿ ನಟ ವಿಜಯ್ ನಡೆಸಿದ ರ‍್ಯಾಲಿ ಕುರಿತು ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಸ್ಟಾಲಿನ್ ‘ನಮ್ಮ ಪಕ್ಷದ ಕಾರ್ಯಕರ್ತರು ಶಿಸ್ತು ಹಾಗೂ ಸಮರ್ಪಣಾ ಮನೋಭಾವ ಹೊಂದಿದ್ದು ರಚನಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸುತ್ತಾರೆ’ ಎಂದಿದ್ದಾರೆ. ‘ತತ್ವರಹಿತ ಜನಸಂದಣಿಯನ್ನು ಒಗ್ಗೂಡಿಸಿ ಜನರಿಗೆ ತೊಂದರೆ ನೀಡುವಂತಹ ಚಳವಳಿಯಲ್ಲ. ಕೂಗಾಡುವ ಗಲಾಟೆ ಮಾಡುವ ಹಾಗೂ ಜನಜೀವನ ಅಸ್ತವ್ಯಸ್ತಗೊಳಿಸುವುದೂ ಇಲ್ಲ. ನಾವು ಒಟ್ಟುಗೂಡಿದಾಗ ಸೈನಿಕರಂತೆ ಶಿಸ್ತುಬದ್ಧವಾಗಿರುತ್ತೇವೆ. ಸಭೆಯ ನಂತರ ಸೈನಿಕರಂತೆ ಕಾರ್ಯಾಚರಣೆಗೆ ಇಳಿಯುತ್ತೇವೆ’ ಎಂದು ಪಕ್ಷದ ಕಾರ್ಯಕರ್ತರಿಗೆ ಶನಿವಾರ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.