ವಿಜಯ್ ಸಿಂಗ್ ಗೊಂಡ
ಸೋನ್‌ಭದ್ರ: ಧೀರ್ಘಕಾಲದ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ದುದ್ಧಿ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಶಾಸಕ ಮತ್ತು ಬುಡಕಟ್ಟು ಸಮುದಾಯದ ಹಿರಿಯ ನಾಯಕ ವಿಜಯ್ ಸಿಂಗ್ ಗೊಂಡ ಇಂದು (ಗುರುವಾರ) ತಮ್ಮ 71ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಗೊಂಡ ಅವರು ಮೂತ್ರಪಿಂಡ ಸಂಬಂಧಿತ ಸಮಸ್ಯೆಯಿಂದ ಲಖನೌನ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (SGPGI) ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ನಿಧನಾರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
‘ವಿಜಯ್ ಸಿಂಗ್ ಗೊಂಡ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಲಖನೌನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನವು ಬುಡಕಟ್ಟು ಸಮುದಾಯಕ್ಕೆ ತುಂಬಲಾಗದ ನಷ್ಟವಾಗಿದೆ’ ಎಂದು ಸಮಾಜವಾದಿ ಪಕ್ಷದ ದುದ್ಧಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅವಧ್ ನಾರಾಯಣ್ ಯಾದವ್ ಹೇಳಿದ್ದಾರೆ.
ಗೊಂಡ ಅವರು 2024ರಲ್ಲಿ ದುದ್ಧಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಉತ್ತರ ಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿದ್ದರು.
1980 ರಲ್ಲಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಗೊಂಡ ಅವರು 1985ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾದರು. ಬಳಿಕ, 1989 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು ನಂತರ 1991 ಮತ್ತು 1993 ರಲ್ಲಿ ಜನತಾ ದಳದಿಂದ ಗೆಲುವು ಸಾಧಿಸಿದ್ದರು. 1996 ಮತ್ತು 2002ರಲ್ಲಿ ಸಮಾಜವಾದಿ ಪಕ್ಷದ ಚಿನ್ಹೆಯಲ್ಲಿ ಗೆಲುವು ಸಾಧಿಸಿದ್ದರು.
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಇತರೆ ಹಿರಿಯ ನಾಯಕರು ಗೊಂಡ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.