ADVERTISEMENT

ಗೃಹ, ಐಟಿ ತಮ್ಮ ಬಳಿ ಉಳಿಸಿಕೊಂಡ ವಿಜಯನ್‌: ಅಳಿಯನಿಗೆ ಲೋಕೋಪಯೋಗಿ ಇಲಾಖೆ

ಅಳಿಯ ಮೊಹ್ಮದ್‌ ರಿಯಾಸ್‌ಗೆ ಲೋಕೋಪಯೋಗಿ ಖಾತೆ ಹೊಣೆ

ಪಿಟಿಐ
Published 21 ಮೇ 2021, 7:57 IST
Last Updated 21 ಮೇ 2021, 7:57 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಗೃಹ ಹಾಗೂ ಐಟಿ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಮೊದಲ ಬಾರಿಗೆ ಸಚಿವರಾಗಿರುವ ಅವರ ಅಳಿಯ ಪಿ.ಎ. ಮೊಹಮ್ಮದ್‌ ರಿಯಾಸ್‌ಗೆ ಲೋಕೋಪಯೋಗಿ ಹಾಗೂ ವೀಣಾ ಜಾರ್ಜ್‌ ಅವರಿಗೆ ಆರೋಗ್ಯ ಖಾತೆಯ ಜವಾಬ್ದಾರಿ ನೀಡಿದ್ದಾರೆ.

ನೂತನ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ಸ್ವೀಕರಿಸಿದ ವಿಜಯನ್‌ ಅವರು ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಪಟ್ಟಿಯನ್ನು ಅದೇ ದಿನ ರಾತ್ರಿ ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ಅವರಿಗೆ ಸಲ್ಲಿಸಿದರು. ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ.

ತಮ್ಮ ಆಪ್ತ ಹಾಗೂ ಮೊದಲ ಬಾರಿಗೆ ಶಾಸಕರಾಗಿರುವ ಕೆ.ಎನ್‌.ಬಾಲಗೋಪಾಲ್‌ ಅವರಿಗೆ ಹಣಕಾಸು ಖಾತೆ ನೀಡಿದ್ದಾರೆ. ಈಗಾಗಲೇ ಸಂಕಷ್ಟದಲ್ಲಿರುವ ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ಚೈತನ್ಯ ನೀಡುವ ಗುರುತರ ಜವಾಬ್ದಾರಿ ಬಾಲಗೋಪಾಲ್‌ ಅವರದ್ದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಆರೋಗ್ಯ ಖಾತೆ ಜೊತೆಗೆ ವೀಣಾ ಜಾರ್ಜ್‌ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಜವಾಬ್ದಾರಿಯನ್ನೂ ನೀಡಲಾಗಿದೆ.

ಪಿ.ರಾಜೀವ್‌ ಅವರಿಗೆ ಕಾನೂನು ಮತ್ತು ಕೈಗಾರಿಕೆ, ವಿ.ಶಿವನ್‌ಕುಟ್ಟಿ ಅವರಿಗೆ ಸಾರ್ವತ್ರಿಕ ಶಿಕ್ಷಣ ಹಾಗೂ ಕಾರ್ಮಿಕ ಖಾತೆ ನೀಡಲಾಗಿದೆ. ರಾಜೀವ್‌ ಅವರು ರಾಜ್ಯಸಭಾ ಸದಸ್ಯರಾಗಿದ್ದ ವೇಳೆ ‘ಸಂಸದ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದರು.

ಎಂ.ವಿ.ಗೋವಿಂದನ್‌ ಅವರಿಗೆ ಸ್ಥಳೀಯ ಸಂಸ್ಥೆಗಳು ಹಾಗೂ ಅಬಕಾರಿ, ಆರ್‌.ಬಿಂದು ಅವರಿಗೆ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ, ಜೆ.ಚಿಂಚುರಾಣಿ ಅವರಿಗೆ ಪಶು ಸಂಗೋಪನೆ ಹಾಗೂ ಡೇರಿ ಅಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ.

ಐದು ಬಾರಿ ಶಾಸಕ ಹಾಗೂ ಮಾಜಿ ಸ್ಪೀಕರ್‌ ಕೆ.ರಾಧಾಕೃಷ್ಣನ್ ಅವರಿಗೆ ಮಹತ್ವದ ಬೆಳವಣಿಗೆಯಲ್ಲಿ ದೇವಸ್ವಂ ಖಾತೆ ನೀಡಲಾಗಿದೆ. ಇವರು ವಿಜಯನ್‌ ನೇತೃತ್ವದ ಸಂಪುಟದಲ್ಲಿನ ಪರಿಶಿಷ್ಟ ಜನಾಂಗದ ಮುಖ. ಸರಳ ಹಾಗೂ ಭ್ರಷ್ಟಾಚಾರದ ಕಳಂಕ ರಹಿತರು ಎಂಬ ಖ್ಯಾತಿ ರಾಧಾಕೃಷ್ಣನ್‌ ಅವರದು. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ ಸೇರಿದಂತೆ ರಾಜ್ಯದಲ್ಲಿರುವ ನೂರಾರು ದೇವಸ್ಥಾನಗಳ ನಿರ್ವಹಣೆಯ ಸವಾಲು ಅವರ ಮುಂದಿದೆ.

21 ಸಚಿವರನ್ನು ಒಳಗೊಂಡ ಸಂಪುಟದಲ್ಲಿ ಸಿಪಿಎಂನ 11 ಸಚಿವರು ಹೊಸಬರೇ ಆಗಿರುವುದು ವಿಶೇಷ. ಸಿಪಿಐನ ನಾಲ್ವರು, ಕೇರಳ ಕಾಂಗ್ರೆಸ್‌ (ಎಂ), ಜೆಡಿಎಸ್‌ ಹಾಗೂ ಎನ್‌ಸಿಪಿಯ ತಲಾ ಒಬ್ಬರು ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಒಬ್ಬರೇ ಶಾಸಕರನ್ನು ಹೊಂದಿರುವ ಮೈತ್ರಿಕೂಟದ ಇತರ ನಾಲ್ಕು ಪಕ್ಷಗಳಿಗೆ ಅವಧಿ ಆಧಾರದ ಮೇಲೆ ಸಚಿವ ಸ್ಥಾನ ನೀಡಲು ಎಲ್‌ಡಿಎಫ್‌ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.