ADVERTISEMENT

ವಿಕಾಸ್‌ ದುಬೆ ಎನ್‌‍ಕೌಂಟರ್‌: ಉತ್ತರ ಪ್ರದೇಶ ಪೊಲೀಸರ ಕ್ರಮ ಸಮರ್ಥಿಸಿದ ಶಿವಸೇನಾ

ಏಜೆನ್ಸೀಸ್
Published 11 ಜುಲೈ 2020, 11:55 IST
Last Updated 11 ಜುಲೈ 2020, 11:55 IST
ಶಿವಸೇನಾ ನಾಯಕ ಸಂಜಯ್‌ ರಾವತ್‌
ಶಿವಸೇನಾ ನಾಯಕ ಸಂಜಯ್‌ ರಾವತ್‌   

ಮುಬೈ: ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆಯನ್ನು ಎನ್‌‍ಕೌಂಟರ್‌ನಲ್ಲಿ ಹತ್ಯೆಮಾಡಿದ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಶಿವಸೇನಾ ಪಕ್ಷವು ಸಮರ್ಥಿಸಿದೆ.

ಕಾನ್ಪುರದಲ್ಲಿ ಎಂಟು ಪೊಲೀಸರನ್ನು ಕೊಂದು ಪರಾರಿಯಾಗಿದ್ದ ವಿಕಾಸ್‌ ದುಬೆಯನ್ನು ಶುಕ್ರವಾರ ಎನ್‌ಕೌಂಟರ್‌ ಮೂಲಕ ಹತ್ಯೆಮಾಡಲಾಗಿತ್ತು. ಈ ವಿಚಾರವು ದೇಶದಾದ್ಯಂತ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದ ಸಂದರ್ಭದಲ್ಲಿ ಶಿವಸೇನಾ ಪಕ್ಷವು ಉತ್ತರ ಪ್ರದೇಶ ಪೊಲೀಸರ ನಡೆಗೆ ಬೆಂಬಲ ವ್ಯಕ್ತಪಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನಾ ನಾಯಕ ಸಂಜಯ್‌ ರಾವತ್‌, 'ಸಮವಸ್ತ್ರದಲ್ಲಿ ಇರುವವರ ಮೇಲೆ ಹಲ್ಲೆ ನಡೆಸಿ, ಎಂಟು ಜನರನ್ನು ಕೊಂದ ಸಮಾಜ ವಿರೋಧಿಯೊಬ್ಬನನ್ನು ಕ್ಷಮಿಸಲು ಸಾಧ್ಯವಿಲ್ಲ. ಅವನು ಎನ್‌ಕೌಂಟರ್‌ನಲ್ಲಿ ಹತ್ಯೆಯಾದಾಗ ಪೊಲೀಸರನ್ನು ಪ್ರಶ್ನಿಸುವುದು ಮತ್ತು ಅವರನ್ನು ನಿರಾಶೆಗೊಳಿಸುವುದು ಸರಿಯಲ್ಲ' ಎಂದು ತಿಳಿಸಿದ್ದಾರೆ.

ADVERTISEMENT

'ಎಂಟು ಪೊಲೀಸರನ್ನು ಹಾಗೆ ಕೊಂದರೆ ರಾಜ್ಯ ಸರ್ಕಾರಕ್ಕೆ ಬೇರೆ ದಾರಿ ಇರುವುದಿಲ್ಲ. ಪೊಲೀಸರು ಎನ್‌ಕೌಂಟರ್ ಮಾಡಿದಾಗ ಮಾಧ್ಯಮ, ರಾಜಕೀಯ ಪಕ್ಷಗಳು ಅಥವಾ ಮಾನವ ಹಕ್ಕುಗಳ ಆಯೋಗ ಯಾರೇ ಆಗಿರಲಿ ಅದನ್ನು ಪ್ರಶ್ನಿಸಬಾರದು. ತನಿಖೆ ನಡೆಸಿ ಆದರೆ ರಾಜಕೀಯಗೊಳಿಸಬೇಡಿ' ಎಂದು ರಾವತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.