ADVERTISEMENT

ಮೊದಲ ಖಾಸಗಿ ರಾಕೆಟ್‌ ಉಡಾವಣೆ ಯಶಸ್ವಿ

ಪಿಟಿಐ
Published 18 ನವೆಂಬರ್ 2022, 21:19 IST
Last Updated 18 ನವೆಂಬರ್ 2022, 21:19 IST
ವಿಕ್ರಂ–ಎಸ್‌ ರಾಕೆಟ್‌ ನಭದತ್ತ ಜಿಗಿದ ಕ್ಷಣ –ಪಿಟಿಐ ಚಿತ್ರ
ವಿಕ್ರಂ–ಎಸ್‌ ರಾಕೆಟ್‌ ನಭದತ್ತ ಜಿಗಿದ ಕ್ಷಣ –ಪಿಟಿಐ ಚಿತ್ರ   

ಶ್ರೀಹರಿಕೋಟಾ (ಆಂಧ್ರಪ್ರದೇಶ):ಸ್ಕೈರೂಟ್‌ ಏರೋಸ್ಪೇಸ್‌ ಕಂಪನಿಯು ಅಭಿವೃದ್ಧಿಪಡಿಸಿರುವ ದೇಶದ ಮೊದಲ ಖಾಸಗಿ ರಾಕೆಟ್‌ ‘ವಿಕ್ರಮ್‌–ಎಸ್‌’ ಮೂಲಕ ಮೂರು ಉಪಗ್ರಹಗಳನ್ನು ಶುಕ್ರವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳ ಪಾಲ್ಗೊಳ್ಳುವಿಕೆಗೆ 2020ರಲ್ಲಿ ಅವಕಾಶ ನೀಡಿದ ನಂತರ, ನಡೆದ ಮೊದಲ ಕಾರ್ಯಾಚರಣೆ ಇದಾಗಿದೆ.

ಸ್ಕೈರೂಟ್‌ ಏರೋಸ್ಪೇಸ್‌ 2018ರಲ್ಲಿ ಸ್ಥಾಪನೆಯಾದ ನವೋದ್ಯಮ. ದೇಶದಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಅಡಿಗಲ್ಲು ಹಾಕಿದ ವಿಜ್ಞಾನಿ ವಿಕ್ರಮ್‌ ಸಾರಾಭಾಯಿ ಅವರ ಗೌರವಾರ್ಥ ಈ ರಾಕೆಟ್‌ಗೆ ಕಂಪನಿಯು ‘ವಿಕ್ರಮ್‌–ಎಸ್‌’ ಎಂದು ಹೆಸರಿಟ್ಟಿದೆ.

ದೇಶೀಯವಾಗಿ ಖಾಸಗಿ ಕಂಪನಿಯೊಂದು ಅಭಿವೃದ್ಧಿಪಡಿಸಿದ ಕ್ರಯೋಜೆನಿಕ್‌ ಎಂಜಿನ್‌ ಮತ್ತು ಬೂಸ್ಟರ್‌ ರಾಕೆಟ್‌ಗಳನ್ನು ಹೊಂದಿರುವ ವಿಕ್ರಮ್‌–ಎಸ್‌, ಈ ಸರಣಿಯ ಮೊದಲ ರಾಕೆಟ್‌. ಇದು 490 ಕೆ.ಜಿ. ತೂಕದಷ್ಟು ಉಪಗ್ರಹಗಳನ್ನು ಗರಿಷ್ಠ 500 ಕಿ.ಮೀ. ಎತ್ತರದ ಕಕ್ಷೆಗೆ ಸೇರಿಸುವ ಸಾಮರ್ಥ್ಯ ಹೊಂದಿದೆ. 510 ಕೆ.ಜಿ. ಭಾರ ಹೊರುವ ಸಾಮರ್ಥ್ಯವಿರುವ ವಿಕ್ರಮ್‌–2 ಮತ್ತು 815 ಕೆ.ಜಿ. ಭಾರ ಹೊರುವ ಸಾಮರ್ಥ್ಯದ ವಿಕ್ರಮ್‌–3 ರಾಕೆಟ್‌ಗಳನ್ನು ಸಹ ಸ್ಕೈರೂಟ್‌ಅಭಿವೃದ್ಧಿಪಡಿಸಿದೆ.

ADVERTISEMENT

ಇಲ್ಲಿನ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಡೆದ ಉಡ್ಡಯನ ಕಾರ್ಯಾಚರಣೆಯಲ್ಲಿ ಇಸ್ರೊ ಅಧ್ಯಕ್ಷ ಸೋಮನಾಥ್, ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಮತ್ತು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಕೇಂದ್ರದ (ಇನ್‌ಸ್ಪೇಸ್‌) ಅಧ್ಯಕ್ಷ ಪವನ್ ಗೋಯೆಂಕಾ ಇದ್ದರು.

ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾತ್ರವೇ ಈವರೆಗೆ ಉಡ್ಡಯನ ಕಾರ್ಯಾಚರಣೆಗಳನ್ನು ನಡೆಸುತ್ತಿತ್ತು. ಖಾಸಗಿ ಕಂಪನಿಗಳು ಸಹ ತಮ್ಮ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಇಸ್ರೊ ರಾಕೆಟ್‌ಗಳನ್ನು ಬಳಸಿ
ಕೊಳ್ಳಬೇಕಿತ್ತು. ಈಗ ಸ್ಕೈರೂಟ್‌ನಂತಹ ಖಾಸಗಿ ಕಂಪನಿಗಳಿಗೆ ಅಂತಹ ಸೇವೆ ನೀಡಲು ಅವಕಾಶ ದೊರೆತಿದೆ.

‘ಭಾರತದ ಖಾಸಗಿ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇದು ಐತಿಹಾಸಿಕ ಕ್ಷಣ ಮತ್ತುಮಹತ್ವದ ಮೈಲುಗಲ್ಲು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಮೂರು ಉಪಗ್ರಹಗಳು ಕಕ್ಷೆಗೆ...
ಭಾರತದ ಖಾಸಗಿ ಕಂಪನಿಗಳ ಎರಡು ಉಪಗ್ರಹಗಳು ಮತ್ತು ಒಂದು ವಿದೇಶಿ ಉಪಗ್ರಹವನ್ನು ‘ವಿಕ್ರಮ್‌–ಎಸ್‌’ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ತಮಿಳುನಾಡಿನ ‘ಸ್ಪೇಸ್‌ಕಿಡ್ಸ್‌’ ಮತ್ತು ಆಂಧ್ರ ಪ್ರದೇಶದ ಸ್ಪೇಸ್‌ಟೆಕ್‌ ನವೋದ್ಯಮಗಳ ಉಪಗ್ರಹಗಳು ಹಾಗೂ ಅಮೆರಿಕದ ಬಝ್ಮೂಕ್ಯು ಸ್ಪೇಸ್‌ ಸೆಂಟರ್‌ನ ಒಂದು ಉಪಗ್ರಹವನ್ನು ವಿಕ್ರಮ್‌–ಎಸ್‌ ಗಮ್ಯ ಸೇರಿಸಿದೆ.

ವಿಕ್ರಮ್‌–ಎಸ್‌ ರಾಕೆಟ್‌ನ ಹಲವು ಬಿಡಿಭಾಗಗಳನ್ನು 3ಡಿ–ಮುದ್ರಣ ತಂತ್ರಜ್ಞಾನ ಬಳಸಿ ತಯಾರಿಸಲಾಗಿತ್ತು. ಈ ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳನ್ನು ಇದು ತೋರಿಸಿದೆ ಎಂದು ಸ್ಕೈರೂಟ್‌ ಏರೋಸ್ಪೇಸ್‌ ಹೇಳಿದೆ.

*

ಭಾರತದ ಖಾಸಗಿ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇದು ಐತಿಹಾಸಿಕ ಕ್ಷಣ ಮತ್ತು ಮಹತ್ವದ ಮೈಲುಗಲ್ಲು. ಇದನ್ನು ಸಾಧಿಸಿದ ಎಲ್ಲರಿಗೂ ಅಭಿನಂದನೆಗಳು
–ನರೇಂದ್ರ ಮೋದಿ, ಪ್ರಧಾನಿ

*

ಇದು ಭಾರತದ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಆರಂಭ. ಹೀಗಾಗಿಯೇ ಈ ಕಾರ್ಯಾಚರಣೆಗೆ ‘ಪ್ರಾರಂಭ’ ಎಂದು ಹೆಸರಿಡಲಾಗಿತ್ತು. ಅದು ಯಶಸ್ವಿಯಾಗಿದೆ
–ಪವನ್ ಚಂದನ್, ಸ್ಕೈರೂಟ್‌ಏರೋಸ್ಪೇಸ್‌ ಸಹಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.