ADVERTISEMENT

ಗುಜರಾತ್: ಕ್ರಿಕೆಟ್‌ ವಿಚಾರಕ್ಕೆ ದಲಿತ ವ್ಯಕ್ತಿಯ ಹೆಬ್ಬೆರಳು ಕತ್ತರಿಸಿದ ಆರೋಪಿಗಳು

ಪಿಟಿಐ
Published 6 ಜೂನ್ 2023, 7:13 IST
Last Updated 6 ಜೂನ್ 2023, 7:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟಾನ್‌: ಕ್ರಿಕೆಟ್‌ ಪಂದ್ಯದ ವೇಳೆ ದಲಿತ ಬಾಲಕನೊಬ್ಬ ಚೆಂಡು ಮುಟ್ಟಿದನೆಂಬ ಕಾರಣಕ್ಕೆ ಆತನ ಚಿಕ್ಕಪ್ಪನ ಹೆಬ್ಬೆರಳು ಕತ್ತರಿಸಿ ಹಲ್ಲೆ ನಡೆಸಿದ ಘಟನೆ ಗುಜರಾತ್‌ನ ಪಟಾನ್‌ ಜಿಲ್ಲೆಯ ಕಾಕೋಶಿ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಏಳು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ‘ಭಾನುವಾರ ಶಾಲೆಯ ಆಟದ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆದಿತ್ತು. ಕ್ರಿಕೆಟ್‌ ನೋಡಲು ಬಂದ ದಲಿತ ಬಾಲಕ ಪಂದ್ಯದ ವೇಳೆ ಚೆಂಡನ್ನು ಹಿಡಿದುಕೊಂಡಿದ್ದನು. ಈ ಕಾರಣಕ್ಕೆ ಕೋಪಗೊಂಡ ಆರೋಪಿಗಳು ಬಾಲಕನಿಗೆ ಬೆದರಿಕೆ ಹಾಕಿದ್ದಲ್ಲದೇ ಜಾತಿ ನಿಂದನೆಯನ್ನೂ ಮಾಡಿದ್ದರು‘ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಬಾಲಕನ ಚಿಕ್ಕಪ್ಪ ಧೀರಜ್‌ ಪರ್ಮಾರ್ ಬಾಲಕನ ಸಹಾಯಕ್ಕೆ ಮುಂದಾಗಿ, ವಿಷಯವನ್ನು ಇತ್ಯರ್ಥ ಪಡಿಸಿದ್ದರು. ಆದರೆ ಈ ವಿಷಯವನ್ನು ಇಷ್ಟಕ್ಕೆ ಬಿಡದ ಆರೋಪಿಗಳು, ಅದೇ ದಿನ ಸಂಜೆ ಬಾಲಕನ ಚಿಕ್ಕಪ್ಪ ಧೀರಜ್‌ ಪರ್ಮಾರ್ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಶಸ್ತ್ರಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಈ ವೇಳೆ ಆರೋಪಿಯೊಬ್ಬ ಕೀರ್ತಿ ಅವರ ಹೆಬ್ಬೆರಳನ್ನೇ ಕತ್ತರಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ADVERTISEMENT

ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಐಪಿಸಿ ಸೆಕ್ಷನ್‌ 326 (ಸ್ವಯಂಪ್ರೇರಿತವಾಗಿ ಆಯುಧಗಳಿಂದ ದೌರ್ಜನ್ಯ ಮಾಡುವುದು), 506 (ಕೊಲೆ ಬೆದರಿಕೆ) ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.