ADVERTISEMENT

‘ಚೀನಾ ಪ್ರಜೆಗಳ ಜೊತೆಗೂಡಿ ಅದಾನಿ ಸಮೂಹದಿಂದ ಬೇನಾಮಿ ಕಂಪನಿ ನಿರ್ವಹಣೆ’

ಪಿಟಿಐ
Published 3 ಮಾರ್ಚ್ 2023, 15:53 IST
Last Updated 3 ಮಾರ್ಚ್ 2023, 15:53 IST
ಜೈರಾಮ್ ರಮೇಶ್
ಜೈರಾಮ್ ರಮೇಶ್   

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಅವರ ಅಣ್ಣ ವಿನೋದ್ ಅದಾನಿ ಅವರು ಚೀನಾದ ಪ್ರಜೆಗಳ ಜೊತೆಗೂಡಿ ಶೆಲ್‌ ಕಂಪನಿಗಳನ್ನು (ನಿಯಮ ಪಾಲಿಸದ ಕಂಪನಿಗಳು) ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷವು ಆರೋಪಿಸಿದೆ.

ಕೇಂದ್ರ ಸರ್ಕಾರವು ಉದ್ಯಮಿಗೆ ನೆರವಾಗುವುದರ ಬದಲಿಗೆ ಅವರ ಉದ್ಯಮ ಸಮೂಹದ ಕಾರ್ಯವೈಖರಿ ಕುರಿತಂತೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಒತ್ತಾಯಿಸಿದ್ದಾರೆ.

ಪ್ರಧಾನಿ ಅವರಿಗೆ ಪತ್ರ ಬರೆದಿರುವ ಜೈರಾಮ್‌ ರಮೇಶ್‌ ಅವರು, ಅದಾನಿ ಸಮೂಹವು ಚೀನಾದ ಜೊತೆಗೆ ಸುದೀರ್ಘ ಕಾಲದಿಂದ ಬಾಂಧವ್ಯ ಹೊಂದಿದೆ. ಚೀನಾದ ಪ್ರಜೆ ಚುಂಗ್ ಲಿಂಗ್‌ ಎಂಬಾತ ಅದಾನಿ ಸಮೂಹದ ಹಲವು ಕಂಪನಿಗಳ ನಿರ್ದೇಶಕನಾಗಿದ್ದಾರೆ. ವಿನೋದ್‌ ಅದಾನಿ ಅವರೊಂದಿಗೆ ಅನೇಕ ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

‘ಹಮ್‌ ಅದಾನಿ ಕೇ ಸಾತ್‌ ಹೈ ಕೌನ್’ ಹೆಸರಿನಲ್ಲಿ ಪಕ್ಷ ನಡೆಸುತ್ತಿರುವ ಅಭಿಯಾನದಡಿ ಮೂರು ಪ್ರಶ್ನೆಗಳನ್ನು ಕೇಳಿರುವ ಅವರು, ಪ್ರಧಾನಿ ಮೋದಿ ಅವರು ಇವುಗಳಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಗೌತಮ್‌ ಅದಾನಿ ನೇತೃತ್ವದ ಸಮೂಹ ಈ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದ್ದು, ಕಾಯ್ದೆಯ ನಿಯಮಗಳನ್ನು ಪಾಲಿಸುತ್ತಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.