ADVERTISEMENT

ಸಂಸದೀಯ ಕಾರ್ಯವಿಧಾನ ಉಲ್ಲಂಘನೆ: ಸ್ಪೀಕರ್‌ಗೆ ಡ್ಯಾನಿಶ್‌ ಅಲಿ ಪತ್ರ

ಪಿಟಿಐ
Published 21 ಅಕ್ಟೋಬರ್ 2023, 14:57 IST
Last Updated 21 ಅಕ್ಟೋಬರ್ 2023, 14:57 IST
<div class="paragraphs"><p>ಡ್ಯಾನಿಶ್‌ ಅಲಿ</p></div>

ಡ್ಯಾನಿಶ್‌ ಅಲಿ

   

ನವದೆಹಲಿ: ಬಿಜೆಪಿ ಸಂಸದ ರಮೇಶ್‌ ಬಿಧೂಢಿ ವಿರುದ್ಧ ತಾವು ನೀಡಿದ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ತಮ್ಮನ್ನು ಮೊದಲು ಕರೆಯದೆ ಸಂಸದೀಯ ಕಾರ್ಯವಿಧಾನ ಪ್ರಕ್ರಿಯೆಯನ್ನು ಉಲ್ಲಂಘಿಸಲಾಗಿದೆ ಎಂದು ಬಿಎಸ್‌ಪಿ ಸಂಸದ ಡ್ಯಾನಿಶ್‌ ಅಲಿ ಅವರು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.

‘ಸೆ.22ರಂದು ಬಿಧೂಢಿ ವಿರುದ್ಧ ಹಕ್ಕುಚ್ಯುತಿ ನೋಟಿಸ್‌ ಸಲ್ಲಿಸಲಾಗಿತ್ತು. ನಿಯಮದ ಪ್ರಕಾರ ಹಕ್ಕುಬಾದ್ಯತಾ ಸಮಿತಿಯು ದೂರುದಾರರನ್ನು ಮೊದಲು ವಿಚಾರಣೆಗೆ ಕರೆಯಬೇಕು, ನಂತರ ಆರೋಪಿಯನ್ನು ಕರೆಯಬೇಕು. ಆದರೆ ಕೋಮು ಸ್ವರೂಪದ ಹೇಳಿಕೆ ನೀಡಿದ ಆರೋಪ ಹೊತ್ತ ಸಂಸದರನ್ನೇ ವಿಚಾರಣೆಗೆ ಕರೆಯಲಾಗಿದೆ. ಈವರೆಗೂ ಸಮಿತಿ ನನ್ನನ್ನು ವಿಚಾರಣೆಗೆ ಕರೆದಿಲ್ಲ’ ಎಂದು ಬಿರ್ಲಾ ಅವರಿಗೆ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

ಇನ್ನೊಂದೆಡೆ ಮಹುವಾ ಮೊಯಿತ್ರಾ ವಿರುದ್ಧದ  ಪ್ರಕರಣದಲ್ಲಿ ನೀತಿ–ನಿಯಮಗಳ ಸಮಿತಿಯು ದೂರುದಾರರನ್ನೇ ಮೊದಲು ವಿಚಾರಣೆಗೆ ಕರೆದು ನಿಯಮ ಪಾಲಿಸಿದೆ. ಹೀಗಾಗಿ ಈ ವಿಷಯದಲ್ಲಿ ಸ್ಪೀಕರ್ ಮಧ್ಯಪ್ರವೇಶಿಸಬೇಕು ಮತ್ತು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲು ಹಕ್ಕುಬಾದ್ಯತಾ ಸಮಿತಿಯ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ ಎಂದು ತಿಳಿಸಿವೆ.

ಇದೇ ವೇಳೆ, ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಉದ್ಯಮಿಯೊಬ್ಬರು ಸಲ್ಲಿಸಿದ ಅಫಿಡವಿಟ್‌ ಸ್ವೀಕರಿಸಲಾಗಿದೆ ಎಂದು ಲೋಕಸಭೆಯ ನೀತಿ–ನಿಯಮಗಳ ಸಮಿತಿಯ ಅಧ್ಯಕ್ಷ ವಿನೋದ್‌ ಸೋಂಕರ್‌  ಮಾಧ್ಯಮಗಳಿಗೆ ಮಾಹಿತಿ ನೀಡಿರುವುದು ನಿಯಮದ ಉಲ್ಲಂಘನೆಯಾಗುತ್ತದೆ ಎಂದೂ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.