ADVERTISEMENT

ಹಾಸನ ಜಿಲ್ಲೆಯ ಆರ್‌.ಕೆ. ಶ್ರೀರಾಮಕುಮಾರ್‌ಗೆ ‘ಸಂಗೀತ ಕಲಾನಿಧಿ’ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 15:33 IST
Last Updated 23 ಮಾರ್ಚ್ 2025, 15:33 IST
ಆರ್‌.ಕೆ. ಶ್ರೀರಾಮಕುಮಾರ್‌
ಆರ್‌.ಕೆ. ಶ್ರೀರಾಮಕುಮಾರ್‌   

ಚೆನ್ನೈ: ಕರ್ನಾಟಕದ ಹಾಸನ ಜಿಲ್ಲೆಯ ರುದ್ರಪಟ್ಟಣ ಗ್ರಾಮದ ಖ್ಯಾತ ಪಿಟೀಲು ವಾದಕ ಆರ್‌.ಕೆ. ಶ್ರೀರಾಮಕುಮಾರ್‌ ಅವರನ್ನು ಪ್ರತಿಷ್ಠಿತ ‘ಸಂಗೀತ ಕಲಾನಿಧಿ ಪ್ರಶಸ್ತಿ’ಗೆ ಚೆನ್ನೈನ ಸಂಗೀತ ಅಕಾಡೆಮಿಯು ಆಯ್ಕೆ ಮಾಡಿದೆ.

ಹಿರಿಯ ಗಾಯಕಿ ಶ್ಯಾಮಲ ವೆಂಕಟೇಶ್ವರನ್‌ ಮತ್ತು ತಬಲ ವಾದಕ ತಾಂಜಾವೂರು ಆರ್‌.ಗೋವಿಂದರಾಜನ್‌ ಅವರನ್ನು ‘ಸಂಗೀತ ಕಲಾ ಆಚಾರ್ಯ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮದಂಬಿ ಸುಬ್ರಮಣಿಯ ನಂಬೂದಿರಿ ಮತ್ತು ಜೆ.ಟಿ. ಜಯರಾಜ್‌ ಕೃಷ್ಣನ್‌ ಹಾಗೂ ಜಯಶ್ರೀ ಕಿಯರಾಜ್‌ ಕೃಷ್ಣನ್‌ ಅವರು ಟಿಟಿಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ADVERTISEMENT

ಮಹಿಳಾ ಲಲಿತಕಲಾ ಕಾಲೇಜು ವಿಶ್ವವಿದ್ಯಾಲಯದ ಪ್ರೊ.ಸಿ.ಎ.ಶ್ರೀಧರ ಅವರಿಗೆ ಮ್ಯೂಸಿಕಾಲಜಿಸ್ಟ್‌ ಪ್ರಶಸ್ತಿ ಮತ್ತು ನೃತ್ಯ ಸಂಯೋಜಕಿ ಊರ್ಮಿಳಾ ಸತ್ಯನಾರಾಯಣ ಅವರಿಗೆ ನೃತ್ಯ ಕಲಾನಿಧಿ ಪ್ರಶಸ್ತಿಯನ್ನು ಪ್ರಕಟಿಸಿದೆ.

2025ರ ಡಿಸೆಂಬರ್ 15ರಿಂದ 2026ರ ಜನವರಿ 1ರ ನಡುವೆ ಹಮ್ಮಿಕೊಳ್ಳಲಾಗುವ ಅಕಾಡೆಮಿಯ 99ನೇ ವಾರ್ಷಿಕ ಸಮಾವೇಶದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ ಎಂದು ಅಕಾಡೆಮಿ ತಿಳಿಸಿದೆ.

2024ರಲ್ಲಿ ಸಾಮಾಜಿಕ ಹೋರಾಟಗಾರ, ಸಂಗೀತಗಾರ ಟಿ.ಎಂ ಕೃಷ್ಣ ಅವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಲಾಗಿತ್ತು. ಈ ಬಗ್ಗೆ ವ್ಯಾಪಕ ಅಪಸ್ವರ ಕೇಳಿಬಂದಿತ್ತು.

ಪಿಟೀಲು ವಾದನದಲ್ಲಿ ಮಾಂತ್ರಿಕ

ರುದ್ರಪಟ್ಟಣ ಎಂಬ ಸಣ್ಣ ಹಳ್ಳಿಯು ಸಾಂಪ್ರದಾಯಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಜಗತ್ತಿನ ಹಲವು ಮೇರು ಪ್ರತಿಭೆಗಳಿಗೆ ಜನ್ಮ ನೀಡಿದೆ. ಅವರಲ್ಲಿ ಶ್ರೀರಾಮಕುಮಾರ್‌ ಸಹ ಒಬ್ಬರು. ಶ್ರೀರಾಮಕುಮಾರ್‌ ಅವರು ತಮ್ಮ ಅಜ್ಜ ಪ್ರಸಿದ್ಧ ಪಿಟೀಲು ವಾದಕ ಆರ್‌.ಕೆ.ವೆಂಕಟರಾಮ ಶಾಸ್ತ್ರಿ ಅವರಿಂದ ತರಬೇತಿ ಪಡೆದಿದ್ದಾರೆ. ಶ್ರೀರಾಮಕುಮಾರ್‌ ಅವರು ಕರ್ನಾಟಕ ಸಂಗೀತ ಕ್ಷೇತ್ರದ ದಂತಕಥೆಗಳಾದ ಸೆಮ್ಮನ್‌ಗುಡಿ ಆರ್.ಶ್ರೀನಿವಾಸ ಅಯ್ಯರ್‌ ಟಿ.ಬೃಂದಾ ಎಂ.ಎಸ್‌.ಸುಬ್ಬುಲಕ್ಷ್ಮಿ ಮತ್ತು ಡಿ.ಕೆ.ಪಟ್ಟಮ್ಮಾಳ್ ಸೇರಿದಂತೆ ಈಗಿನ ಸಂಗೀತಗಾರರೊಂದಿಗೂ ಸಂಗೀತ ಸುಧೆ ಹರಿಸಿದ್ದಾರೆ. ಅವರ ಪಿಟೀಲು ವಾದನ ಪ್ರದರ್ಶನಗಳು ಅವರ ಸಂಯೋಜನೆಗಳು ಮತ್ತು ಹಾಡುಗಳ ಸಂಯೋಜನೆಗಳು ಈಗಲೂ ಪ್ರಸಿದ್ಧಿ ಪಡೆದಿವೆ ಮತ್ತು ಸಂಗೀತ ಪ್ರಿಯರನ್ನು ಸೆಳೆಯುವ ಮಾಂತ್ರಿಕ ಶಕ್ತಿಯನ್ನು ಹೊಂದಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.