ADVERTISEMENT

ಮೌಂಟ್‌ ಎವರೆಸ್ಟ್‌ಗೆ ಚಾರಣ ಮುಂದುವರಿಸಿದ 41 ತಂಡಗಳು

ಏಜೆನ್ಸೀಸ್
Published 29 ಮೇ 2021, 10:15 IST
Last Updated 29 ಮೇ 2021, 10:15 IST
ಮೌಂಟ್‌ ಎವರೆಸ್ಟ್‌
ಮೌಂಟ್‌ ಎವರೆಸ್ಟ್‌   

ಕಠ್ಮಂಡು: ಸಾಂಕ್ರಾಮಿಕ ಕಾಯಿಲೆಯೂ ಮೌಂಟ್‌ ಎವರೆಸ್ಟ್‌ ಚಾರಣದ ಮೇಲೆ ಪರಿಣಾಮ ಬೀರಿಲ್ಲ. ಇನ್ನೇನು ಈ ಋತು ಮುಗಿಯಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ನೂರಾರು ಪರ್ವತಾರೋಹಿಗಳು ತಮ್ಮ ಚಾರಣವನ್ನು ಮುಂದುವರಿಸಿದ್ದಾರೆ.

ಮೌಂಟ್‌ ಎವರೆಸ್ಟ್‌ನಲ್ಲಿ ಕೋವಿಡ್‌ ಪ್ರಕರಣಗಳು ವರದಿಯಾಗಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಹಲವು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ವರದಿಯೊಂದು ಹೇಳಿತ್ತು. ಇದರ ಬೆನ್ನಲ್ಲೇ ಈ ತಿಂಗಳು ಮೂರು ತಂಡಗಳು ತಮ್ಮ ಚಾರಣವನ್ನು ರದ್ದುಗೊಳಿಸಿವೆ. ಆದರೆ, ನೂರಾರು ಪವರ್ತಾರೋಹಿಗಳನ್ನೊಳಗೊಂಡ 41 ತಂಡಗಳು 8,849 ಮೀಟರ್‌ ಎತ್ತರದ ಎವರೆಸ್ಟ್‌ಗೆ ತನ್ನ ಚಾರಣವನ್ನು ಮುಂದುವರಿಸಿವೆ.

‘ಕೊರೊನಾ ವೈರಸ್‌ ಬಹುಶಃ ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಅನ್ನು ತಲುಪಿರಬಹುದು. ಆದರೆ ಹೊರಗಿನವರು ಹೇಳುವಂತೆ ದೊಡ್ಡ ಮಟ್ಟದಲ್ಲಿ ಸೋಂಕು ವ್ಯಾಪಿಸಿಲ್ಲ. ಕೋವಿಡ್‌ನಿಂದಾಗಿ ಯಾರೂ ಕೂಡ ತೀವ್ರ ಅನಾರೋಗ್ಯಕ್ಕೆ ಒಳಗಾಗಿಲ್ಲ ಅಥವಾ ಸಾವಿಗೀಡಾಗಿಲ್ಲ. ಇದು ಕೇವಲ ಗಾಳಿ ಸುದ್ದಿ’ ಎಂದು ಸೆವೆನ್‌ ಸಮಿಟ್‌ ಟ್ರೆಕ್‌ನ ಮಿಂಗ್ಮಾ ಶೆರ್ಪಾ ಅವರು ತಿಳಿಸಿದರು.

ADVERTISEMENT

‘ಹಲವರು ಬೇಸ್‌ ಕ್ಯಾಂಪ್‌ ತಲುಪಿದ್ದಾರೆ. ಅವರಲ್ಲಿ ಕೆಲವರಿಗೆ ಸೋಂಕು ತಗುಲಿರುವ ಸಾಧ್ಯತೆಗಳಿವೆ. ಆದರೆ, ಸೋಂಕು ಸಂಪೂರ್ಣ ಮೌಂಟ್‌ ಎವರೆಸ್ಟ್‌ನಲ್ಲಿ ಹರಡಿದೆ ಎಂದು ಹೇಳುವುದು ಸರಿಯಲ್ಲ’ ಎಂದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ಹೇಳಿದ್ದಾರೆ.

ನೇಪಾಳದಲ್ಲಿ ಶುಕ್ರವಾರ 6,951 ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ಸಂದರ್ಭದಲ್ಲಿ 96 ಮಂದಿ ಮೃತಪಟ್ಟಿದ್ದಾರೆ. ಈವರೆಗೆ ನೇಪಾಳದಲ್ಲಿ ಒಟ್ಟು 549,111 ಪ್ರಕರಣಗಳು ವರದಿಯಾಗಿದ್ದು, 7,047 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.