ನವದೆಹಲಿ: ದೃಷ್ಟಿ ದೋಷವುಳ್ಳವರಿಗೆ ನ್ಯಾಯಾಂಗ ಸೇವೆಗಳಲ್ಲಿ ಉದ್ಯೋಗಾವಕಾಶವನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪಿನಲ್ಲಿ ಹೇಳಿದೆ.
ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದೀವಾಲಾ ಮತ್ತು ಆರ್. ಮಹದೇವನ್ ಅವರಿದ್ದ ನ್ಯಾಯ ಪೀಠವು ಕಳೆದ ವರ್ಷ ಡಿಸೆಂಬರ್ 3 ರಂದು ಕೆಲವು ರಾಜ್ಯಗಳಲ್ಲಿ ನ್ಯಾಯಾಂಗ ಸೇವೆಗಳಲ್ಲಿ ಅಂಧ ಅಭ್ಯರ್ಥಿಗಳಿಗೆ ಕೋಟಾ ನೀಡದಿರುವ ಬಗ್ಗೆ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣ ಸೇರಿದಂತೆ ಆರು ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿತ್ತು.
ತೀರ್ಪು ಪ್ರಕಟಿಸಿದ ನ್ಯಾ. ಮಹದೇವನ್, ದೇಹ ದೌರ್ಬಲ್ಯದ ಕಾರಣಕ್ಕೆ ನ್ಯಾಯಾಂಗ ಸೇವೆಯ ನೇಮಕಾತಿಗಳಲ್ಲಿ ಯಾವುದೇ ತಾರತಮ್ಯವನ್ನು ಮಾಡಕೂಡದು. ಅಂತವರನ್ನೂ ಒಳಗೊಂಡ ಚೌಕಟ್ಟನ್ನು ಖಚಿತಪಡಿಸಿಕೊಳ್ಳಲು ರಾಜ್ಯವು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಯಾವುದೇ ವ್ಯಕ್ತಿಯನ್ನು ಅಂಗವೈಕಲ್ಯ ಕಾರಣದಿಂದ ದೂರವಿಡುವಂತಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮಧ್ಯಪ್ರದೇಶ ಸೇವಾ ಪರೀಕ್ಷೆ (ನೇಮಕಾತಿ ಮತ್ತು ಸೇವೆಗಳ ಷರತ್ತುಗಳು) ನಿಯಮಗಳು 1994ರ ದೃಷ್ಟಿಹೀನ ಮತ್ತು ಕಡಿಮೆ ದೃಷ್ಟಿ ಹೊಂದಿರುವ ಅಭ್ಯರ್ಥಿಗಳನ್ನು ನ್ಯಾಯಾಂಗ ಸೇವೆಗೆ ಪ್ರವೇಶಿಸುವುದನ್ನು ನಿರ್ಬಂಧಿಸುವುದು ಸೇರಿ ಕೆಲವು ನಿಯಮಗಳನ್ನು ಬದಿಗಿರಿಸಿ ತೀರ್ಪು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.