ADVERTISEMENT

ಆ್ಯಪಲ್‌ ಉದ್ಯೋಗಿ ಹತ್ಯೆ; ಅಗತ್ಯವಿದ್ದಲ್ಲಿ ಸಿಬಿಐ ತನಿಖೆ ಎಂದ ಯೋಗಿ ಆದಿತ್ಯನಾಥ್

ಏಜೆನ್ಸೀಸ್
Published 29 ಸೆಪ್ಟೆಂಬರ್ 2018, 9:41 IST
Last Updated 29 ಸೆಪ್ಟೆಂಬರ್ 2018, 9:41 IST
ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)
ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)   

ಲಖನೌ: ಆ್ಯಪಲ್ ಕಂಪೆನಿ ಉದ್ಯೋಗಿವಿವೇಕ್ ತಿವಾರಿ ಹತ್ಯೆ ಪ್ರಕರಣವನ್ನು ಅಗತ್ಯವಿದ್ದಲ್ಲಿ ಸಿಬಿಐ ತನಿಖೆಗೆ ವಹಿಸಲು ಸಿದ್ಧ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಹೇಳಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಇದು ಎನ್‌ಕೌಂಟರ್ ಅಲ್ಲ. ಹತ್ಯೆ ಬಗ್ಗೆ ತನಿಖೆ ನಡೆಸಲಾಗುವುದು. ಅಗತ್ಯವೆನಿಸಿದಲ್ಲಿ ಸಿಬಿಐ ತನಿಖೆಗೆ ಆದೇಶಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.

ಘಟನೆ ಸಂಬಂಧ ತನಿಖೆ ನಡೆಸಲು ಲಖನೌ ಪೊಲೀಸರು ಈಗಾಗಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ.

ADVERTISEMENT

‘ಅಪರಾಧ ವಿಭಾಗದ ಎಸ್‌ಪಿ ಅವರ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ಮ್ಯಾಜಿಸ್ಟ್ರೇಟ್‌ ತನಿಖೆಗಾಗಿ ಮ್ಯಾಜಿಸ್ಟ್ರೇಟರಿಗೆ ಮನವಿ ಕಳುಹಿಸಿದ್ದೇನೆ’ ಎಂದು ಲಖನೌ ಎಸ್‌ಪಿ ಕಲಾನಿಧಿ ನೈಥನಿ ತಿಳಿಸಿದ್ದಾರೆ.

ವಿವೇಕ್‌ ತಿವಾರಿ ಕುಟುಂಬದವರು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.

ಆ್ಯಪಲ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ತಿವಾರಿ ಅವರು ಶುಕ್ರವಾರ ರಾತ್ರಿ ಮಾಜಿ ಸಹೋದ್ಯೋಗಿ ಜತೆ ಕಾರಿನಲ್ಲಿ ತೆರಳುತ್ತಿದ್ದಾಗ ಪೊಲೀಸ್ ಪೇದೆಯೊಬ್ಬರು ಗುಂಡಿಕ್ಕಿ ಹತ್ಯೆ ಮಾಡಿದ್ದರು.ಗುಂಡು ಹಾರಿಸಿದ ಪೇದೆಯನ್ನು ಪ್ರಶಾಂತ್ ಕುಮಾರ್ ಎಂದು ಗುರುತಿಸಲಾಗಿದೆ. ಪ್ರಶಾಂತ್ ಕುಮಾರ್ ಗಸ್ತು ತಿರಗುತ್ತಿದ್ದ ಬೈಕಿಗೆ ವಿವೇಕ್‌ ತಿವಾರಿ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಪ್ರಶಾಂತ್ ಏಕಾಏಕಿ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ವಿವೇಕ್‌ ತಿವಾರಿ ಸ್ಥಳದಲ್ಲೇ ಮೃತಪಟ್ಟಿದ್ದರು.ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾಗಿಪ್ರಶಾಂತ್ ಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.