ADVERTISEMENT

ಫೆ.7ರ ಬದಲು 8ರಂದು ಚೆನ್ನೈಗೆ ಶಶಿಕಲಾ: ಅದ್ದೂರಿ ಸ್ವಾಗತಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 15:06 IST
Last Updated 4 ಫೆಬ್ರುವರಿ 2021, 15:06 IST
ವಿ.ಕೆ. ಶಶಿಕಲಾ
ವಿ.ಕೆ. ಶಶಿಕಲಾ   

ಚೆನ್ನೈ: ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಬೆಂಗಳೂರಿನಿಂದ ತಮಿಳುನಾಡಿಗೆ ತೆರಳುವುದು ಒಂದು ದಿನ ವಿಳಂಬವಾಗಲಿದೆ.

‘ಚಿನ್ನಮ್ಮ (ವಿ.ಕೆ. ಶಶಿಕಲಾ) ಫೆಬ್ರುವರಿ 7ರ ಬದಲು ಫೆಬ್ರುವರಿ 8ರಂದು ತಮಿಳುನಾಡಿಗೆ ಬರಲಿದ್ದಾರೆ’ ಎಂದು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪ್ರಧಾನ ಕಾರ್ಯದರ್ಶಿ ಮತ್ತು ಶಶಿಕಲಾ ಸಂಬಂಧಿ ಟಿ.ಟಿ.ವಿ ದಿನಕರನ್ ತಿಳಿಸಿದ್ದಾರೆ.

ಬೆಂಗಳೂರಿನಿಂದ ಚೆನ್ನೈಗೆ ಬರಲಿರುವ ಶಶಿಕಲಾ ಅವರಿಗೆ ಅದ್ದೂರಿ ಸ್ವಾಗತ ನೀಡಲು ಎಎಂಎಂಕೆ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ. ಶಶಿಕಲಾ ಅವರ ಪ್ರಯಾಣದ ಸಂದರ್ಭದಲ್ಲಿ ಹೆಲಿಕಾಪ್ಟರ್‌ಗಳ ಮೂಲಕ ಪುಷ್ಪಗಳನ್ನು ಸುರಿಯಲು ಅನುಮತಿ ನೀಡುವಂತೆ ಕೋರಿ ಮಾಜಿ ಶಾಸಕಿ ಜಯಂತಿ ಪದ್ಮನಾಭನ್‌ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ADVERTISEMENT

ಬೆಂಗಳೂರಿನಿಂದ ಚೆನ್ನೈ ಮಾರ್ಗದಲ್ಲಿ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ.

ಶಶಿಕಲಾ ವಿರುದ್ಧ ದೂರು: ಶಶಿಕಲಾ ಅವರು ಪಕ್ಷದ ಧ್ವಜವನ್ನು ಕಾನೂನುಬಾಹಿರವಾಗಿ ತಮ್ಮ ಕಾರಿನ ಮೇಲೆ ಬಳಸಿದ್ದಾರೆ ಎಂದು ಆರೋಪಿಸಿ ಎಐಎಡಿಎಂಕೆ ಹಿರಿಯ ಮುಖಂಡರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್‌ ಮಹಾನಿರ್ದೇಶಕ ಜೆ.ಕೆ. ತ್ರಿಪಾಠಿ ಅವರನ್ನು ಭೇಟಿಯಾದ ನಾಲ್ವರು ಸಚಿವರು ಮತ್ತು ಪಕ್ಷದ ಹಿರಿಯ ಮುಖಂಡರು, ಎಐಎಡಿಎಂಕೆ ಧ್ವಜವನ್ನು ಹೊರಗಿನವರು ಬಳಸಲು ಅವಕಾಶ ಇಲ್ಲ ಎಂದು ತಿಳಿಸಿದರು.

‘ಪಕ್ಷದ ಧ್ವಜ ಬಳಸಲು ಶಶಿಕಲಾ ಅವರಿಗೆ ಯಾವುದೇ ರೀತಿಯ ಹಕ್ಕು ಇಲ್ಲ. ಎಐಎಡಿಎಂಕೆ ಪ್ರಾಥಮಿಕ ಸದಸ್ಯತ್ವವವನ್ನೂ ಅವರು ಹೊಂದಿಲ್ಲ. ಪಕ್ಷದ ಪದಾಧಿಕಾರಿಗಳು ಮಾತ್ರ ಧ್ವಜ ಬಳಸಬಹುದು’ ಎಂದು ಕಾನೂನು ಸಚಿವ ಷಣ್ಮುಗಂ ತಿಳಿಸಿದ್ದಾರೆ.

ಜನವರಿ 31ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾದಾಗ ಶಶಿಕಲಾ ಬಳಸಿದ್ದ ಕಾರಿನ ಮೇಲೆ ಎಐಎಡಿಎಂಕೆ ಪಕ್ಷದ ಧ್ವಜ ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.