ADVERTISEMENT

ವಾರದಲ್ಲಿ ಹೊಸ ಪಕ್ಷದ ಹೆಸರು ಘೋಷಣೆ: ವಿ.ಕೆ. ಶಶಿಕಲಾ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 7:39 IST
Last Updated 26 ಫೆಬ್ರುವರಿ 2026, 7:39 IST
ವಿ.ಕೆ. ಶಶಿಕಲಾ
ವಿ.ಕೆ. ಶಶಿಕಲಾ   

ಚೆನ್ನೈ: ವಾರದಲ್ಲಿ ತಮ್ಮ ಹೊಸ ರಾಜಕೀಯ ಪಕ್ಷದ ಹೆಸರನ್ನು ಘೋಷಣೆ ಮಾಡುವುದಾಗಿ ಎಐಎಡಿಎಂಕೆಯ ಉಚ್ಛಾಟಿತ ನಾಯಕಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ಘೋಷಿಸಿದ್ದಾರೆ. ಅಲ್ಲದೆ, ಇದೇ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ ಎಂದಿದ್ದಾರೆ.

ಜಯಲಲಿತಾ ಅವರ 78ನೇ ಜನ್ಮ ಜಯಂತಿಯಂದು ರಾಮನಾಥಪುರಂ ಜಿಲ್ಲೆಯ ಕಾಮುತಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಹೊಸ ಪಕ್ಷದ ಧ್ವಜವನ್ನು ಅನಾವರಣಗೊಳಿಸುವ ಮೂಲಕ ತಮ್ಮ ಒಂಬತ್ತು ವರ್ಷಗಳ ರಾಜಕೀಯ ವಿರಾಮಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದ ಶಶಿಕಲಾ, ಅದಾದ ಕೇವಲ ಎರಡು ದಿನಗಳ ನಂತರ ಈ ಘೋಷಣೆ ಮಾಡಿದ್ದಾರೆ.

‘ನಮ್ಮ ಪಕ್ಷದ ಹೆಸರನ್ನು ಒಂದು ವಾರದೊಳಗೆ ಬಹಿರಂಗಪಡಿಸಲಾಗುವುದು. ಮೈತ್ರಿ ಕುರಿತಂತೆಯೂ ಮಾತುಕತೆ ನಡೆಸುತ್ತಿದ್ದೇವೆ. ಆ ಬಗ್ಗೆ ಉತ್ತಮ ನಿರ್ಧಾರ ಕೈಗೊಳ್ಳಲಾಗುವುದು’ಎಂದು ಶಶಿಕಲಾ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ಕೆಲವೇ ತಿಂಗಳುಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಚುನಾವಣೆ ಹೊಸ್ತಿಲಲ್ಲಿ ಹೊಸ ಪಕ್ಷ ಕಟ್ಟುವುದಾಗಿ ಘೋಷಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತಮಿಳುನಾಡಿನ ಜನರಿಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿದೆ. ಮತದಾರರನ್ನು ತಲುಪಲು ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.

ರಾಮನಾಥಪುರಂ ಕಾರ್ಯಕ್ರಮದ ಸಂದರ್ಭದಲ್ಲಿ ಅನಾವರಣಗೊಳಿಸಿದ ಹೊಸ ಪಕ್ಷದ ಧ್ವಜವು ಕಪ್ಪು, ಬಿಳಿ ಮತ್ತು ಕೆಂಪು ಬಣ್ಣದ ಅಡ್ಡ ಪಟ್ಟೆಗಳನ್ನು ಹೊಂದಿದ್ದು, ದ್ರಾವಿಡ ಹೋರಾಟದ ದಿಗ್ಗಜರಾದ ಸಿ ಎನ್ ಅಣ್ಣಾದೊರೈ, ಎಂ ಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ಭಾವಚಿತ್ರಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.