ADVERTISEMENT

ಬಿಜೆಪಿ, ಆರ್‌ಎಸ್‌ಎಸ್‌ನಿಂದ ಮತ ಕಳವು: ರಾಹುಲ್‌ ಗಾಂಧಿ ಆರೋಪ

ಪಿಟಿಐ
Published 2 ನವೆಂಬರ್ 2025, 13:33 IST
Last Updated 2 ನವೆಂಬರ್ 2025, 13:33 IST
ರಾಹುಲ್‌ ಗಾಂಧಿ–ಪಿಟಿಐ ಚಿತ್ರ
ರಾಹುಲ್‌ ಗಾಂಧಿ–ಪಿಟಿಐ ಚಿತ್ರ   

ಆರಾ/ ಬೆಗೂಸರಾಯ್ (ಬಿಹಾರ):  ‘ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಮತ್ತು ಮಧ್ಯ ಪ್ರದೇಶದ ಚುನಾವಣೆಗಳನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ‘ಸಂಪೂರ್ಣವಾಗಿ ಕದ್ದಿವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದರು.

ಬೆಗೂಸರಾಯ್‌ನಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಅವರು ‘ಚುನಾವಣಾ ಆಯೋಗವು ಬಿಹಾರದಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ಬೆಂಬಲಿಗರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದೆ. ನಾವು ಇದಕ್ಕೆ ಈಗಾಗಲೇ ಪುರಾವೆಗಳನ್ನು ಒದಗಿಸಿದ್ದು, ಅದನ್ನು ಮತ್ತೆ ಒದಗಿಸುತ್ತೇವೆ’ ಎಂದರು. 

‘ಪ್ರಧಾನಿ ಮೋದಿ ಅವರು ಮತ ಗಳಿಕೆಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ’ ಎಂದು ಹೇಳಿದ ಕಾಂಗ್ರೆಸ್‌ ನಾಯಕ, ‘ನೀವು ಅವರಿಗೆ (ಪ್ರಧಾನಿಗೆ) ಯೋಗ ಮಾಡಲು ಹೇಳಿದರೆ ಅವರು ಕೆಲವು ಆಸನಗಳನ್ನು ಮಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಮತ ಗಳಿಸಲು ಅವರು ವೇದಿಕೆಯ ಮೇಲೆ ನೃತ್ಯ ಮಾಡುತ್ತಾರೆ. ಚುನಾವಣೆಯ ದಿನದವರೆಗೆ ನೀವು ಏನೇ ಹೇಳಿದರೂ ಮೋದಿ ಅದನ್ನು ಮಾಡುವರು. ಏಕೆಂದರೆ, ಚುನಾವಣೆಯ ನಂತರ ಅವರು ತಮ್ಮ ನೆಚ್ಚಿನ ಉದ್ಯಮಿಗಳ ಪರವಾಗಿ ಮಾತ್ರ ಕೆಲಸ ಮಾಡುತ್ತಾರೆ’ ಎಂದು ಟೀಕಿಸಿದರು. 

ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅದು ಯಾವುದೇ ನಿರ್ದಿಷ್ಟ ಜಾತಿಗೆ ಸೀಮಿತವಾಗಿರದೆ, ಸಮಾಜದ ಪ್ರತಿಯೊಂದು ವರ್ಗದ ಏಳಿಗೆಗಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.

ಯುವಜನರು ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳದಂತೆ ಅವರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಧಾನಿ ರೀಲ್‌ಗಳನ್ನು ವೀಕ್ಷಿಸುವಂತೆ ಕೇಳುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.