ಲೋಕಸಭೆ ಅಧಿವೇಶನ
ಪ್ರಾತಿನಿಧಿಕ ಚಿತ್ರ
ನವದೆಹಲಿ: ‘ಮತ ಕಳ್ಳತನ’ ಹಾಗೂ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ಶುಕ್ರವಾರವೂ ಪ್ರತಿಭಟಿಸಿದ್ದರಿಂದ, ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಬೆಳಿಗ್ಗೆ 11 ಗಂಟೆಗೆ ಲೋಕ ಸಭೆಯ ಕಲಾಪ ಶುರುವಾಗುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಅವರು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಗೆ ಗೌರವ ನಮನ ಸಲ್ಲಿಸಿದರು.
ಬಳಿಕ, ವಿರೋಧ ಪಕ್ಷಗಳ ಸದಸ್ಯರು ಎಸ್‌ಐಆರ್ ಚರ್ಚೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಫಲಕ ಪ್ರದರ್ಶಿಸಿ, ಸದನದ ಬಾವಿಗಿಳಿದರು. ಇದರ ಮಧ್ಯೆಯೇ ಓಂ ಬಿರ್ಲಾ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. 23 ನಿಮಿಷ ಸದನ ನಡೆಸಿದರು. ಈ ಅವಧಿಯಲ್ಲಿ ಐದು ಪ್ರಶ್ನೆ, ಪೂರಕ ಪ್ರಶ್ನೆಗಳನ್ನು ತೆಗೆದುಕೊಂಡರು. ಗದ್ದಲ ಹೆಚ್ಚಾಗಿದ್ದರಿಂದ ಸದನವನ್ನು ಮುಂದೂಡಿದರು.
ಮಧ್ಯಾಹ್ನ 3 ಗಂಟೆಗೆ ಸದನವು ಮತ್ತೆ ಸಮಾವೇಶಗೊಳ್ಳುತ್ತಿದ್ದಂತೆ ಪ್ರತಿಪಕ್ಷಗಳ ಸಂಸದರು ಸ್ಪೀಕರ್ ಸ್ಥಾನದತ್ತ ತೆರಳಿ ಎಸ್ಐಆರ್ ಚರ್ಚೆಗೆ ಅವಕಾಶ ಕೊಡಬೇಕು ಎಂದು ಮೇಜು ತಟ್ಟಿ ಆಗ್ರಹಿಸಿದರು.
ಇದಕ್ಕೆ ಸ್ಪೀಕರ್ ಸ್ಥಾನದಲ್ಲಿದ್ದ ಕೃಷ್ಣ ಪ್ರಸಾದ್ ತೆನ್ನೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳ ಗದ್ದಲ ಜೋರಾಗುತ್ತಿದ್ದಂತೆ ಕಲಾಪವನ್ನು ಮುಂದೂಡಿದರು.
‘ಪ್ರತಿಪಕ್ಷಗಳು ಸದನದ ಸಮಯ ವನ್ನು ವ್ಯರ್ಥ ಮಾಡುತ್ತಿರುವುದು ದುರದೃಷ್ಟಕರ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ‘ಮತ ಕಳ್ಳತನ’ ಪ್ರಸ್ತಾಪ: ರಾಜ್ಯಸಭೆಯು ಬೆಳಿಗ್ಗೆ 11ಕ್ಕೆ ಸಮಾವೇಶಗೊಳ್ಳುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಯಿಂದ ಮುಂದೂಡಲ್ಪಟ್ಟಿತು.
ಮಧ್ಯಾಹ್ನ 12 ಗಂಟೆಗೆ ಮತ್ತೆ ಸಮಾವೇಶಗೊಳ್ಳುತ್ತಿದ್ದಂತೆ, ಸಭಾಪತಿ ಪೀಠದಲ್ಲಿದ್ದ ಘನಶ್ಯಾಮ್ ತಿವಾರಿ ಪ್ರಶ್ನೋತ್ತರ ಕೈಗೆತ್ತಿಕೊಳ್ಳಲು ಮುಂದಾದರು. ವಿಪಕ್ಷಗಳ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರು ಕರ್ನಾಟಕದ ಲೋಕಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ‘ಮತ ಕಳ್ಳತನ’ದ ವಿಷಯವನ್ನು ಪ್ರಸ್ತಾಪಿಸಲು ಮುಂದಾದರು. ಸಭಾಪತಿ ಪೀಠದಲ್ಲಿದ್ದ ಘನಶ್ಯಾಮ್ ತಿವಾರಿ ಅವರು ತಿವಾರಿಗೆ ಮಾತನಾಡಲು ಅವಕಾಶವನ್ನೇ ಕೊಡಲಿಲ್ಲ.
‘ಆದಾಯ– ತೆರಿಗೆ ಮಸೂದೆ’ ವಾಪಸ್
‘ಆದಾಯ– ತೆರಿಗೆ ಮಸೂದೆ, 2025’ ಅನ್ನು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ವಿರೋಧ ಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಹಿಂಪಡೆದರು.
ಈ ಮಸೂದೆಗೆ ಸಂಬಂಧಿಸಿದಂತೆ ಪರಿಶೀಲನಾ ಸಮಿತಿಯು ಸೂಚಿಸಿರುವ ಬದಲಾವಣೆಗಳನ್ನು ಸೇರ್ಪಡೆಗೊಳಿಸಿದ ನಂತರ, ಸರ್ಕಾರವು ಆ.11ರಂದು ಮತ್ತೆ ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆಯ ಪರಿಷ್ಕೃತ ಮಸೂದೆಯು, ಪರಿಶೀಲನಾ ಸಮಿತಿಯ ಎಲ್ಲ ಶಿಫಾರಸುಗಳನ್ನು ಒಳಗೊಂಡಿದೆ ಎನ್ನಲಾಗಿದೆ.
ಬೈಜಯಂತ್ ಪಾಂಡಾ ನೇತೃತ್ವದ ಪರಿಶೀಲನಾ ಸಮಿತಿಯು ಫೆ. 13ರಂದು ಲೋಕಸಭೆಯಲ್ಲಿ ಮಂಡಿಸಲಾದ ಆದಾಯ ತೆರಿಗೆ ಮಸೂದೆಯಲ್ಲಿ ಹಲವು ಬದಲಾವಣೆಗಳನ್ನು ಸೂಚಿಸಿದೆ.
ಐಟಿಆರ್ ಸಲ್ಲಿಸಿದ ದಿನಾಂಕದ ನಂತರವೂ ಯಾವುದೇ ದಂಡ ಶುಲ್ಕ ಪಾವತಿಸದೆ ತೆರಿಗೆದಾರರಿಗೆ ಟಿಡಿಎಸ್ ಮರುಪಾವತಿಯನ್ನು ಪಡೆಯಲು ಅವಕಾಶ ನೀಡುವುದು ಹಾಗೂ ಧಾರ್ಮಿಕ– ದತ್ತಿ ಟ್ರಸ್ಟ್‌ಗಳಿಗೆ ನೀಡಿದ ಅನಾಮಧೇಯ ದೇಣಿಗೆಗಳ ಮೇಲೆ ತೆರಿಗೆ ವಿನಾಯಿತಿ ಮುಂದುವರಿಸಬೇಕು ಎಂಬುದು ಪರಿಶೀಲನಾ ಸಮಿತಿಯು ಜುಲೈ 21ರಂದು ಲೋಕಸಭೆಗೆ ಸಲ್ಲಿಸಿರುವ ವರದಿಯಲ್ಲಿರುವ ಪ್ರಮುಖ ಶಿಫಾರಸು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.