ADVERTISEMENT

ಮತದಾರ ಪಟ್ಟಿ | ಹೆಸರು ಕೈಬಿಡಲು ಕೋರಿ 2.07 ಲಕ್ಷ ಅರ್ಜಿ ಸಲ್ಲಿಕೆ: ಚುನಾವಣಾ ಆಯೋಗ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 15:42 IST
Last Updated 31 ಆಗಸ್ಟ್ 2025, 15:42 IST
...
...   

ನವದೆಹಲಿ: ಮತದಾರರ ಪಟ್ಟಿಯಿಂದ ಕೈಬಿಡುವಂತೆ ಕೋರಿ 2.07 ಲಕ್ಷ ಅರ್ಜಿಗಳು ಬಿಹಾರದಲ್ಲಿ ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ಭಾನುವಾರ ಮಾಹಿತಿ ನೀಡಿದೆ. 

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಭಾಗವಾಗಿ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ಕರಡು ಮತದಾರರ ಪಟ್ಟಿ ಕುರಿತು ಆಕ್ಷೇಪಣೆ ಸಲ್ಲಿಸಲು ನಿಗದಿ ಪಡಿಸಿರುವ ಕಾಲಮಿತಿ ಕೊನೆಗೊಳ್ಳಲು ಒಂದು ದಿನ ಬಾಕಿ ಇರುವಾಗ ಆಯೋಗ ಈ ಮಾಹಿತಿ ನೀಡಿದೆ. ಅಂತಿಮ ಮತದಾರರ ಪಟ್ಟಿಯು ಸೆಪ್ಟೆಂಬರ್‌ 30ರಂದು ಬಿಡುಗಡೆಯಾಗಲಿದೆ.

ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿರುವ 65 ಲಕ್ಷ ಮಂದಿಯ ಪೈಕಿ 33,236 ಮಂದಿ ಮಾತ್ರ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಆಯೋಗ ತಿಳಿಸಿದೆ.

ADVERTISEMENT

ಅಲ್ಲದೇ, ಸಿಪಿಐ(ಎಂಎಲ್‌)ಎಲ್‌ ಪಕ್ಷದ ಬೂತ್‌ ಮಟ್ಟದ ಏಜೆಂಟ್‌ಗಳ ಮೂಲಕ 128 ಅರ್ಜಿಗಳು ಸಲ್ಲಿಕೆಯಾಗಿವೆ. 15 ಅರ್ಜಿಗಳು ಮತದಾರರ ಸೇರ್ಪಡೆಗೆ ಹಾಗೂ 103 ಅರ್ಜಿಗಳು ಹೆಸರುಗಳನ್ನು ಕೈಬಿಡುವಂತೆ ಕೋರಿ ಸಲ್ಲಿಕೆಯಾಗಿವೆ. ಆರ್‌ಜೆಡಿ 10 ಅರ್ಜಿಗಳನ್ನು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಕೋರಿ ಸಲ್ಲಿಸಿದೆ ಎಂದೂ ಮಾಹಿತಿ ನೀಡಿದೆ.

ಜತೆಗೆ 15.32 ಲಕ್ಷ ಮಂದಿ ಹೊಸ ಮತದಾರರು (18ವರ್ಷ ಪೂರೈಸಿದವರು) ಕೂಡ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.