
ಅಮಿತ್ ಶಾ
ಭುಜ್ (ಗುಜರಾತ್): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಗೆಲುವು ದೇಶದಲ್ಲಿ ನುಸುಳುಕೋರರ ವಿರುದ್ಧದ ಜನಾದೇಶವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
‘ಕೆಲವು ರಾಜಕೀಯ ಪಕ್ಷಗಳು ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸುತ್ತಿವೆ. ಏಕೆಂದರೆ, ನುಸುಳುಕೋರರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಆ ಪಕ್ಷಗಳು ಬಯಸುತ್ತವೆ’ ಎಂದಿದ್ದಾರೆ.
ಗುಜರಾತ್‌ನ ಕಛ್ ಜಿಲ್ಲೆಯ ಭುಜ್‌ನಲ್ಲಿ ಬಿಎಸ್‌ಎಫ್ ವಜ್ರ ಮಹೋತ್ಸವ (61ನೇ ರೈಸಿಂಗ್ ಡೇ) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಪ್ರಕ್ರಿಯೆಯನ್ನು ಮತದಾರರ ಪಟ್ಟಿಯ ‘ಶುದ್ಧೀಕರಣ’ ಎಂದು ಬಣ್ಣಿಸಿದರು.
‘ಇಂದು, ಗಡಿ ಭದ್ರತಾ ಪಡೆಯವರು (ಬಿಎಸ್‌ಎಫ್) ದೇಶದ ಎಲ್ಲಾ ಗಡಿಗಳಲ್ಲಿ ಒಳನುಸುಳುವಿಕೆಯನ್ನು ತಡೆಗಟ್ಟುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಮಾತ್ರವಲ್ಲದೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಕಲುಷಿತಗೊಳ್ಳದಂತೆ ನೋಡಿಕೊಳ್ಳಲು ಒಳನುಸುಳುವಿಕೆಯನ್ನು ತಡೆಯುವುದು ಅಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.
ಆದರೂ, ಕೆಲವು ರಾಜಕೀಯ ಪಕ್ಷಗಳು ಒಳನುಸುಳುವಿಕೆ ತಡೆಯಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.
‘ಈ ದೇಶದಿಂದ ಪ್ರತಿಯೊಬ್ಬ ನುಸುಳುಕೋರರನ್ನು ಗಡಿಪಾರು ಮಾಡುತ್ತೇವೆ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇದು ನಮ್ಮ ದೃಢಸಂಕಲ್ಪ’ ಎಂದು ಪುನರುಚ್ಚರಿಸಿದರು.
ಅಕ್ರಮ ವಲಸಿಗರನ್ನು ಬೆಂಬಲಿಸುವ ಪಕ್ಷಗಳತ್ತ ನಾಗರಿಕರು ತಮ್ಮ ಒಲವು ತೋರುವುದಿಲ್ಲ ಎಂಬುದನ್ನು ಬಿಹಾರ ವಿಧಾನಸಭಾ ಚುನಾವಣೆ ಸಾಬೀತುಪಡಿಸಿದೆಅಮಿತ್ ಶಾ ಕೇಂದ್ರ ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.