ADVERTISEMENT

ಎಸ್‌ಐಆರ್ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ:ಚುನಾವಣಾ ಆಯೋಗಕ್ಕೆ ನೋಟಿಸ್‌

ಎಸ್‌ಐಆರ್ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 15:58 IST
Last Updated 11 ನವೆಂಬರ್ 2025, 15:58 IST
New Delhi: Supreme Court of India, in New Delhi, Monday, July 31, 2023. (PTI Photo) (PTI07_31_2023_000154B)
New Delhi: Supreme Court of India, in New Delhi, Monday, July 31, 2023. (PTI Photo) (PTI07_31_2023_000154B)   

ನವದೆಹಲಿ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಈ ಬಗ್ಗೆ ವಿವರಣೆ ನೀಡುವಂತೆ ಚುನಾವಣಾ ಆಯೋಗಕ್ಕೆ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ. 

ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಆಯೋಗಕ್ಕೆ ನೋಟಿಸ್‌ ನೀಡಿದ್ದು, ಈ ಬಗ್ಗೆ ವಿವರವಾದ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಮುಂದಿನ ವಿಚಾರಣೆ ನವೆಂಬರ್‌ 26ಕ್ಕೆ ನಡೆಯಲಿದೆ. 

ಈ ವಿಚಾರಣೆ ಪೂರ್ಣಗೊಳ್ಳುವವರೆಗೆ ತಮಿಳುನಾಡು, ಪಶ್ಚಿಮ ಬಂಗಾಳ ಸೇರಿ ಬೇರೆ ರಾಜ್ಯಗಳಲ್ಲಿ ಎಸ್‌ಐಆರ್‌ ಪ್ರಶ್ನಿಸಿ ಸಲ್ಲಿಸಲಾಗುವ ಅರ್ಜಿಗಳ ವಿಚಾರಣೆ ತಡೆಹಿಡಿಯುವಂತೆ ಅಥವಾ ಮುಂದೂಡುವಂತೆಯೂ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. 

ADVERTISEMENT

ಡಿಎಂಕೆ ಪಕ್ಷದ ಪರವಾಗಿ ಹಾಜರಾದ ವಕೀಲ ಕಪಿಲ್‌ ಸಿಬಲ್‌ ಅವರು, ‘ಮತದಾರರ ಪಟ್ಟಿ ಪರಿಷ್ಕರಣೆಗೆ ಸಾಮಾನ್ಯವಾಗಿ ಮೂರು ವರ್ಷಗಳು ಬೇಕಾಗುತ್ತವೆ. ಆದರೆ, ಈಗ, ತರಾತುರಿಯಲ್ಲಿ ಎಸ್‌ಐಆರ್‌ ಜಾರಿಗೊಳಿಸಲಾಗಿದೆ. ಪರಿಷ್ಕರಣೆ ವೇಳೆ ಮತದಾರರ ವಿವರಗಳನ್ನು ಒಳಗೊಂಡ ಅರ್ಜಿಗಳನ್ನು ಅಪ್‌ಲೋಡ್‌ ಮಾಡಲು 5ಜಿ ನೆಟ್‌ವರ್ಕ್‌ ಬೇಕಾಗುತ್ತದೆ. ಆದರೆ, ಹಲವೆಡೆ ನೆಟ್‌ವರ್ಕ್‌ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ’ ಎಂದು ಪೀಠದ ಗಮನಕ್ಕೆ ತಂದರು.  

ಆಯೋಗದ ಪರವಾಗಿ ಹಾಜರಾದ ವಕೀಲ ರಾಕೇಶ್‌ ದ್ವಿವೇದಿ ಅವರು, ‘ರಾಜ್ಯಗಳು ಅಭಿವೃದ್ಧಿ ಹೊಂದಿವೆ ಎಂದು ಹೇಳಿಕೊಳ್ಳುವ ಬದಲು, ಎಷ್ಟು  ಹಿಂದುಳಿದಿವೆ ಎನ್ನುವುದನ್ನು ತೋರಿಸಿಕೊಳ್ಳಲು ಪೈಪೋಟಿ ನಡೆಸುತ್ತಿವೆ’ ಎಂದರು.

ವಾದ ಆಲಿಸಿದ ಪೀಠವು, ‘ಎಸ್‌ಐಆರ್‌ ಬಗ್ಗೆ ಇಷ್ಟೊಂದು ಭಯವೇಕೆ ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಈ ಬಗ್ಗೆ ವಿವರಣೆ ನೀಡಿದ ಕಪಿಲ್‌ ಸಿಬಲ್‌, ‘ಎಸ್‌ಐಆರ್‌ ವಿರೋಧಿಸಲು ರಾಜ್ಯಗಳಿಗೆ ವಿಭಿನ್ನ ಕಾರಣಗಳಿವೆ. ತಮಿಳುನಾಡಿನಲ್ಲಿ ಎಸ್‌ಐಆರ್‌ ನಡೆಯುವ ಸಮಯದಲ್ಲಿ ಮಳೆಗಾಲ ಇರುತ್ತದೆ. ಬೂತ್‌ ಮಟ್ಟದ ಅಧಿಕಾರಿಗಳು ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ನೇಮಕಗೊಂಡಿರುತ್ತಾರೆ. ಡಿಸೆಂಬರ್‌–ಜನವರಿಯಲ್ಲಿ ಕಟಾವಿನ ಸಮಯವಾಗಿದ್ದು, ಆಗಲೂ ಸೂಕ್ತ ಸಮಯವಲ್ಲ’ ಎಂದರು. 

‘ನಿಮ್ಮ ವಾದ ನೋಡಿದರೆ, ನಮ್ಮ ದೇಶದಲ್ಲಿ ಇದೇ ಮೊದಲ ಬಾರಿಗೆ ಎಸ್‌ಐಆರ್‌ ನಡೆಯುತ್ತಿದೆ ಎನ್ನುವ ರೀತಿಯಲ್ಲಿದೆ. ನಮಗೂ ವಾಸ್ತವಾಂಶದ ಅರಿವು ಇದೆ’ ಎಂದು ಪೀಠವು ಅರ್ಜಿದಾರರಿಗೆ ಎಚ್ಚರಿಕೆ ನೀಡಿತು.  

12 ರಾಜ್ಯಗಳಲ್ಲಿ ಎಸ್‌ಐಆರ್‌

ಸ್‌ಐಆರ್‌ನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಟಿಎಂಸಿ ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್‌ ಸಮಿತಿ ಸಿಪಿಐಎಂ ಮತ್ತು ಡಿಎಂಕೆ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. 

ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಜೂನ್‌ 24ರಂದು ಎಸ್‌ಐಆರ್‌ ಜಾರಿಗೊಳಿಸಲಾಗಿತ್ತು. ನಂತರ ಇದನ್ನು ತಮಿಳುನಾಡು ಪಶ್ಚಿಮ ಬಂಗಾಳ ಕೇರಳ ಪುದುಚೇರಿ ಸೇರಿ 12 ರಾಜ್ಯಗಳಿಗೆ ವಿಸ್ತರಿಸಲಾಗಿತ್ತು. ಸುಮಾರು 51 ಕೋಟಿ ಮತದಾರರು ಎಸ್‌ಐಆರ್‌ ವ್ಯಾಪ್ತಿಗೆ ಬರಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.