ADVERTISEMENT

ವ್ಯಾಪಂ ಹಗರಣ: ಐವರಿಗೆ 7 ವರ್ಷಗಳ ಕಠಿಣ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 13:44 IST
Last Updated 30 ಸೆಪ್ಟೆಂಬರ್ 2022, 13:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್‌: ವ್ಯಾಪಂ (ಮಧ್ಯಪ್ರದೇಶ ವ್ಯವ್‌ಸಾಯಿಕ್‌ ಪರೀಕ್ಷಾ ಮಂಡಲ್‌) ಹಗರಣಕ್ಕೆ ಸಂಬಂಧಿಸಿದಂತೆ ಐವರಿಗೆ ಏಳು ವರ್ಷಗಳ ಕಠಿಣ ಸಜೆಯನ್ನು ಇಲ್ಲಿಯ ವಿಶೇಷ ಸಿಬಿಐ ಕೋರ್ಟ್‌ ವಿಧಿಸಿದೆ.

2013ರಲ್ಲಿ ವ್ಯಾಪಂ ನಡೆಸಿದ್ದ ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದ್ದ ಅವ್ಯವಹಾರಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಕಮಲ್‌ ಕಿಶೋರ್‌, ಅಮರ್‌ ಸಿಂಗ್‌, ನಾಗೇಂದ್ರ ಸಿಂಗ್‌, ಸುರೇಶ್‌ ಸಿಂಗ್‌ ಮತ್ತು ರವಿಕುಮಾರ್‌ ರಜಪೂತ್‌ ಅವರಿಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನೀತಿರಾಜ್‌ ಸಿಂಗ್‌ ಸಿಸೋಡಿಯಾ ಅವರು ಗುರುವಾರ ಶಿಕ್ಷೆ ವಿಧಿಸಿದರು.

ದೋಷಿಗಳಿಗೆ ತಲಾ ₹10,000 ದಂಡ ವಿಧಿಸಲಾಗಿದೆ. ಈ ಪ್ರಕರಣದಲ್ಲಿ 32 ಸಾಕ್ಷಿಗಳನ್ನು ಮತ್ತು 220 ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಮನೂಜಿ ಉಪಾಧ್ಯಾಯ್‌ ಅವರು ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.

ADVERTISEMENT

ಕಮಲ್‌, ಅಮರ್‌, ನಾಗೇಂದ್ರ ಮತ್ತು ಸುರೇಶ್‌ ಅವರು ಪರೀಕ್ಷೆಯನ್ನು ಬೇರೆಯವರಿಂದ ಬರೆಸಿದ್ದರು. ನಾಗೇಂದ್ರ ಅವರ ಬದಲಾಗಿ ರವಿಕುಮಾರ್‌ ಅವರು ಪರೀಕ್ಷೆ ಬರೆದಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 419 (ಸೋಗು ಹಾಕುವುದು), 420 (ವಂಚನೆ), 467 (ಭದ್ರತೆಯ ವರ್ಗಾವಣೆ), 468 (ದಾಖಲೆಗಳ ನಕಲು) ಮತ್ತು 471 (ನಕಲಿ ದಾಖಲೆಗಳ ಬಳಕೆ) ಅಡಿ ಅವರೆಲ್ಲರನ್ನೂ ದೋಷಿಗಳೆಂದು ಪರಿಗಣಿಸಲಾಗಿದೆ.

ವ್ಯಾಪಂ ಹಗರಣದ ತನಿಖೆಯನ್ನು ಸುಪ್ರೀಂ ಕೋರ್ಟ್‌ 2015ರಲ್ಲಿ ಸಿಬಿಐಗೆ ವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.