ಭಾರತೀಯ ಸೇನೆ
(ಪಿಟಿಐ ಸಂಗ್ರಹ ಚಿತ್ರ)
ಬಾಲೇಶ್ವರ: ‘ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಹೋರಾಡಲು ಭಾರತೀಯ ಸೇನೆಗೆ ಸೇರಲು ಬಯಸುತ್ತೇನೆ’–ಇದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಂದೆಯನ್ನು ಕಳೆದುಕೊಂಡ 9 ವರ್ಷದ ಬಾಲಕ ತನುಜ್ ಕುಮಾರ್ ಸತ್ಪತಿ ಅವರ ಭಾವೋದ್ವೇಗದ ನುಡಿ.
ಒಡಿಶಾದ ಬಾಲೇಶ್ವರ ಜಿಲ್ಲೆಯಲ್ಲಿ ಗುರುವಾರ ಮಾತನಾಡಿದ ಬಾಲಕ, ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಲ್ಲಿ, ಮುಂದಿನ ದಿನಗಳಲ್ಲಿ ಯಾವುದೇ ಮಗುವಿಗೂ ನನ್ನ ಸ್ಥಿತಿ ಎದುರಾಗದಂತೆ ನೋಡಿಕೊಳ್ಳುವಂತೆ ಹೇಳುತ್ತೇನೆ. ನನಗೆ ಈಗ ತಂದೆಯ ಬೆಲೆ ಗೊತ್ತಾಗಿದೆ. ಭಾರತದ ನೆಲದಲ್ಲಿ ಭಯೋತ್ಪಾದನೆಗೆ ಅವಕಾಶ ಇಲ್ಲದಂತೆ ಪಹಲ್ಗಾಮ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಭದ್ರತೆ ಕಲ್ಪಿಸಬೇಕು’ ಎಂದು ತಿಳಿಸಿದ್ದಾನೆ.
‘ತಂದೆಯ ಸಾವಿನ ಪ್ರತೀಕಾರ ತೀರಿಸಿಕೊಳ್ಳಲು ಸೇನೆಗೆ ಸೇರಲು ನಿರ್ಧರಿಸಿದ್ದೇನೆ. ಸೇನೆಗೆ ಸೇರುವ ನಿಟ್ಟಿನಲ್ಲಿ ಉತ್ತಮವಾಗಿ ಓದುತ್ತೇನೆ. ಸೇನೆಗೆ ಸೇರಿ, ಪಾಕಿಸ್ತಾನ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡುತ್ತೇನೆ. ಬುಧವಾರ ಬೆಳಗ್ಗೆಯಿಂದ ಪ್ರಸಾರವಾಗುತ್ತಿರುವ ಸುದ್ದಿ ಕಂಡು ನನ್ನ ಅಮ್ಮ ಮತ್ತು ನನಗೆ ಖುಷಿಯಾಗಿದೆ. ನಮ್ಮ ಸೇನೆಯ ಬಗ್ಗೆ ಹೆಮ್ಮೆ ಇದೆ’ ಎಂದಿದ್ದಾನೆ.
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಬಾಲಕ ತನುಜ್ ಕುಮಾರ್ ಸತ್ಪತಿ ಅವರ ತಂದೆ ಪ್ರಶಾಂತ್ ಸತ್ಪತಿ ಸೇರಿದಂತೆ 26 ನಾಗರಿಕರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.