ಲಖನೌ: ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲವು ನಿಯಮಗಳನ್ನು ಪುರನರ್ ಪರಿಶೀಲನೆ ನಡೆಸಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಕಾನೂನನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಡಬೇಕು ಎಂದು ಹೇಳಿದ್ದಾರೆ.
ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮರಲ್ಲದವರು ಇರುವುದಕ್ಕೆ ಕಾನೂನಿನಲ್ಲಿ ಅವಕಾಶ ನೀಡಿರುವುದು ಮೇಲ್ನೋಟಕ್ಕೆ ಸರಿ ಕಾಣುವುದಿಲ್ಲ ಎಂದು ಅವರು ಹೇಳಿದ್ದಾರೆ.
‘ರಾಜ್ಯ ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮರಲ್ಲದವರನ್ನು ಸದಸ್ಯರನ್ನಾಗಿ ಮಾಡುವುದು ತಪ್ಪು. ಮುಸ್ಲಿಂ ಸಮುದಾಯ ಕೂಡ ಇದನ್ನು ವಿರೋಧಿಸಿದೆ. ಹೀಗಾಗಿ ಕಾನೂನನ್ನು ಮರುಪರಿಶೀಲನೆ ನಡೆಸಿ, ಅಮಾನತುಗೊಳಿಸಿ ಇತರ ವಿವಾದಾತ್ಮಕ ನಿಯಮಗಳನ್ನು ಸುಧಾರಿಸುವುದು ಉತ್ತಮ’ ಎಂದು ಮಾಯಾವತಿ ಹೇಳಿದ್ದಾರೆ.
ಉಭಯ ಮನೆಗಳಲ್ಲಿ ಭಾರಿ ಚರ್ಚೆಯ ಬಳಿಕ ವಿವಾದಾತ್ಮಕ ವಕ್ಫ್ ಮಸೂದೆಗೆ ಒಪ್ಪಿಗೆ ಲಭಿಸಿತ್ತು. ಲೋಕಸಭೆಯಲ್ಲಿ 288 ಸದಸ್ಯರು ವಕ್ಫ್ ಮಸೂದೆ ಬೆಂಬಲಿಸಿದರೆ, 232 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು.
ರಾಜ್ಯಸಭೆಯಲ್ಲಿ 128 ಸದಸ್ಯರು ಪರವಾಗಿ ಮತ್ತು 95 ಸದಸ್ಯರು ವಿರೋಧಿಸಿ ಮತ ಚಲಾಯಿಸಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಏಪ್ರಿಲ್ 5 ರಂದು ಮಸೂದೆಗೆ ಒಪ್ಪಿಗೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.