ADVERTISEMENT

ವಕ್ಫ್ ಮಸೂದೆ ವಿರುದ್ಧ ಶೀಘ್ರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ: ಕಾಂಗ್ರೆಸ್

ಪಿಟಿಐ
Published 4 ಏಪ್ರಿಲ್ 2025, 6:42 IST
Last Updated 4 ಏಪ್ರಿಲ್ 2025, 6:42 IST
ಜೈರಾಮ್ ರಮೇಶ್
ಜೈರಾಮ್ ರಮೇಶ್   

ನವದೆಹಲಿ: ಸಂಸತ್‌ನಲ್ಲಿ ಅಂಗೀಕರಿಸಲಾಗಿರುವ ವಿವಾದಾತ್ಮಕ ವಕ್ಪ್‌ (ತಿದ್ದುಪಡಿ) ಮಸೂದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಶೀಘ್ರವೇ ಕೋರ್ಟ್‌ ಮೆಟ್ಟಿಲೇರಲಾಗುವುದು ಎಂದು ಕಾಂಗ್ರೆಸ್‌ ಶುಕ್ರವಾರ ಹೇಳಿದೆ.

‘ಸಮಾಜವನ್ನು ಶಾಶ್ವತವಾಗಿ ಧ್ರುವೀಕರಣಗೊಂಡ ಸ್ಥಿತಿಯಲ್ಲಿ ಇಡುವ ಬಿಜೆಪಿಯ ಉದ್ದೇಶಪೂರ್ವಕ ಕಾರ್ಯತಂತ್ರದ ಭಾಗವೇ ಈ ಮಸೂದೆ’ ಎಂದೂ ಕಾಂಗ್ರೆಸ್‌ ಟೀಕಿಸಿದೆ.

‘ಈ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆ–2019, ಚುನಾವಣೆ ನಿರ್ವಹಣೆ ನಿಯಮಗಳು(2024) ಹಾಗೂ ಪೂಜಾಸ್ಥಳಗಳ ಕಾಯ್ದೆ–1991ಕ್ಕೆ ತಂದಿದ್ದ ತಿದ್ದುಪಡಿ ವಿರುದ್ಧ ಪಕ್ಷವು ಕಾನೂನಾತ್ಮಕ ಹೋರಾಟ ನಡೆಸಿತ್ತು’ ಎಂದಿರುವ ಕಾಂಗ್ರೆಸ್‌, ಸಂವಿಧಾನದಲ್ಲಿ ಅಡಕವಾಗಿರುವ ತತ್ವಗಳು, ಅವಕಾಶಗಳ ಮೇಲೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಡೆಸಲಿರುವ ದಾಳಿಗಳಿಗೆ ಪ್ರತಿರೋಧ ಒಡ್ಡುವುದನ್ನು ಪಕ್ಷ ಮುಂದುವರಿಸಲಿದೆ’ ಎಂದಿದೆ.

ADVERTISEMENT

ವಕ್ಫ್‌ ತಿದ್ದುಪಡಿ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ವಿಧಾನಸಭೆಯಲ್ಲಿ ಘೋಷಿಸಿದ ಮಾರನೇ ದಿನವೇ ಕಾಂಗ್ರೆಸ್‌ನಿಂದ ಈ ಹೇಳಿಕೆ ಹೊರಬಿದ್ದಿದೆ.

‘ಅಲ್ಪಸಂಖ್ಯಾತರಿಗೆ ತೊಂದರೆ ಕೊಡುವ ಉದ್ಧೇಶದಿಂದಲೇ ವಕ್ಫ್‌ ತಿದ್ದುಪಡಿ ಮಸೂದೆ ರೂಪಿಸಲಾಗಿದೆ ಎಂಬ ಭಾವನೆ ದೇಶದೆಲ್ಲೆಡೆ ಮನೆ ಮಾಡಿದೆ. ಲೋಕಸಭೆಯಲ್ಲಿ ತಡರಾತ್ರಿ ಈ ಮಸೂದೆಯನ್ನು ಮತಕ್ಕೆ ಹಾಕಲಾಯಿತು. ಮಸೂದೆ ಪರವಾಗಿ 288 ಹಾಗೂ ವಿರುದ್ಧವಾಗಿ 232 ಮತಗಳು ಬಿದ್ದವು. ಇದು ಹೇಗೆ ಸಾಧ್ಯವಾಯಿತು? ಮಸೂದೆಯಲ್ಲಿ ನ್ಯೂನತೆಗಳಿವೆ ಎಂಬುದನ್ನು ಇದು ತೋರಿಸುತ್ತದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

‘ಮುಸ್ಲಿಮರನ್ನು ತುಳಿಯಲು ಈ ಮಸೂದೆ ಒಂದು ಆಯುಧವಾಗಿದ್ದು, ಅವರ ವೈಯಕ್ತಿಕ ಕಾನೂನುಗಳು ಹಾಗೂ ಆಸ್ತಿ ಹಕ್ಕುಗಳನ್ನು ಕಸಿಯುವ ಉದ್ದೇಶವನ್ನೂ ಈ ಮಸೂದೆ ಹೊಂದಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. 

ವಕ್ಫ್‌ ಜಮೀನುಗಳನ್ನು ವಶಪಡಿಸಿಕೊಂಡು ಅವುಗಳನ್ನು ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಹಂಚುವ ವ್ಯವಸ್ಥೆಯೊಂದನ್ನು ಮೋದಿ ನೇತೃತ್ವದ ಸರ್ಕಾರ ರೂಪಿಸಿದೆ
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.