ADVERTISEMENT

ಪಾವಗಡ ಅಥವಾ ರಿವಾ, ಏಷ್ಯಾದಲ್ಲಿ ಯಾವ ಸೌರ ಘಟಕ ದೊಡ್ಡದು? ಕೈ–ಬಿಜೆಪಿ ಜಟಾಪಟಿ

ಏಷ್ಯಾದಲ್ಲಿ ಯಾವುದು ದೊಡ್ಡದು: ಬಿಜೆಪಿ, ಕಾಂಗ್ರೆಸ್‌ ನಾಯಕರ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 15:46 IST
Last Updated 11 ಜುಲೈ 2020, 15:46 IST
ಪಾವಗಡದಲ್ಲಿರುವ ಸೌರ ವಿದ್ಯುತ್‌ ಘಟಕದ ಉದ್ಘಾಟನೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್‌.   (ಸಂಗ್ರಹ ಚಿತ್ರ)
ಪಾವಗಡದಲ್ಲಿರುವ ಸೌರ ವಿದ್ಯುತ್‌ ಘಟಕದ ಉದ್ಘಾಟನೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್‌.   (ಸಂಗ್ರಹ ಚಿತ್ರ)   

ಭೋಪಾಲ: ಕರ್ನಾಟಕದ ಪಾವಗಡ ಮತ್ತು ಮಧ್ಯಪ್ರದೇಶದ ರಿವಾದಲ್ಲಿ ಸ್ಥಾಪಿಸಿರುವ ಸೌರವಿದ್ಯುತ್‌ ಘಟಕಗಳ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದ ಆರಂಭವಾಗಿದೆ.

ರಿವಾದಲ್ಲಿ ಸ್ಥಾಪಿಸಿರುವ 750 ಮೆಗಾವಾಟ್‌ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆ ಏಷ್ಯಾದಲ್ಲೇ ಅತಿ ದೊಡ್ಡದು ಎಂದು ಮೋದಿ ಸರ್ಕಾರ ಪ್ರತಿಪಾದಿಸಿರುವುದಕ್ಕೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ.

ತುಮಕೂರು ಜಿಲ್ಲೆಯ ಪಾವಗಡದಲ್ಲಿ ಸ್ಥಾಪಿಸಿರುವ 2,000 ಮೆಗಾವಾಟ್‌ ಸಾಮರ್ಥ್ಯದ ಸೌರ ವಿದ್ಯುತ್‌ ಯೋಜನೆಯನ್ನು ರಿವಾದಲ್ಲಿರುವ ಘಟಕಕ್ಕೆ ಹೋಲಿಸಲು ಸಾಧ್ಯವೇ ಎಂದು ಪ್ರಶ್ನಿಸಿದೆ.

ADVERTISEMENT

13,000 ಎಕರೆ ಪ್ರದೇಶದಲ್ಲಿ 2018ರಿಂದ ಈ ಘಟಕ ಕಾರ್ಯನಿರ್ವಹಿಸುತ್ತಿದೆ. ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ಅವರು ಈ ಯೋಜನೆಯ ರೂವಾರಿಯಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘750 ಮೆಗಾವಾಟ್‌ ಸೌರ ಘಟಕ ಏಷ್ಯಾದಲ್ಲೇ ದೊಡ್ಡದು ಎನ್ನುವುದಾದರೆ ಪಾವಗಡದ 2000 ಮೆಗಾ ವಾಟ್‌ ಸೌರ ಘಟಕ ಏನು’ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ‘ಅಸತ್ಯಗ್ರಾಹಿ’ ಎಂದು ಒಂದೇ ಶಬ್ದದಲ್ಲಿ ಬಿಜೆಪಿಯನ್ನು ಟೀಕಿಸಿದ್ದಾರೆ.

‘ಪ್ರಧಾನಿ ನರೇಂದ್ರ ಅವರ ಸುಳ್ಳಿನ ಕಂತೆಗೆ ಇನ್ನಷ್ಟು ಸೇರಿವೆ’ ಎಂದು ಮಧ್ಯಪ್ರದೇಶ ಕಾಂಗ್ರೆಸ್‌ ಪ್ರದೇಶ ಕಾಂಗ್ರೆಸ್‌ ಘಟಕ ಟ್ವೀಟ್‌ ಮಾಡಿದೆ.

‘ಜೋಧಪುರದಲ್ಲಿ 2245 ಮೆಗಾವಾಟ್‌, ಪಾವಗಡದಲ್ಲಿ 2000 ಮೆಗಾವಾಟ್‌ ಮತ್ತು ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ 1000 ಮೆಗಾವಾಟ್‌ ಸಾಮರ್ಥ್ಯದ ಸೌರ ವಿದ್ಯುತ್‌ ಘಟಕಗಳು ರಿವಾ ಘಟಕಕ್ಕಿಂತಲೂ ದೊಡ್ಡದಾಗಿವೆ. ಹೀಗಾಗಿ, ಮೋದಿ ಅವರು ಕ್ರಮೇಣವಾಗಿಯಾದರೂ ಸತ್ಯ ನುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಲಿ’ ಎಂದು ವ್ಯಂಗ್ಯವಾಡಿದೆ.

ಮಧ್ಯಪ್ರದೇಶ ಬಿಜೆ‍ಪಿ ಘಟಕವೂ ಈ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ‘ಇಡೀ ಪಕ್ಷವೇ ಮಾನಸಿಕ ಅಸಮತೋಲನವನ್ನು ಕಳೆದುಕೊಂಡ ರೀತಿಯಲ್ಲಿ ವರ್ತಿಸುತ್ತಿದೆ. ರಿವಾದಲ್ಲಿ ನಿರ್ಮಿಸಿರುವುದು ಸೋಲಾರ್‌ ಘಟಕವಾದರೆ, ದೇಶದ ಇತರೆಡೆ ಇರುವುದು ಸೋಲಾರ್ ಪಾರ್ಕ್‌ಗಳು. ಈ ಯೋಜನೆಗಳನ್ನು ಒಂದಕ್ಕೊಂದು ಹೋಲಿಸುವುದು ಸರಿ ಅಲ್ಲ’ ಎಂದು ಪ್ರತಿಪಾದಿಸಿದೆ.

‘ಸೋಲಾರ್‌ ಪಾರ್ಕ್‌ಗಳನ್ನು ನಿರ್ದಿಷ್ಟ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತದೆ. ಸೋಲಾರ್‌ ಪಾರ್ಕ್‌ನಲ್ಲಿ ಸೌರ ವಿದ್ಯುತ್‌ ಘಟಕಗಳನ್ನು ಸ್ಥಾಪಿಸಲು ಉದ್ಯಮಿಗಳಿಗೆ ಜಮೀನಿನ ಯಾವುದೇ ತೊಡಕುಗಳಾಗುವುದಿಲ್ಲ’ ಎಂದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.