ADVERTISEMENT

17ರ ಮೊದಲೇ ಮಗು ಹಡೆಯುವುದು ಸಾಮಾನ್ಯವಾಗಿತ್ತು: ಮನುಸ್ಮೃತಿ ಓದಿ ಎಂದ ನ್ಯಾಯಮೂರ್ತಿ

ಪಿಟಿಐ
Published 9 ಜೂನ್ 2023, 6:32 IST
Last Updated 9 ಜೂನ್ 2023, 6:32 IST
   

ಅಹಮದಾಬಾದ್: ಹುಡುಗಿಯರು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು 17 ವರ್ಷ ತುಂಬುವ ಮೊದಲು ಮಗುವಿಗೆ ಜನ್ಮ ನೀಡುವುದು ಸಾಮಾನ್ಯವಾಗಿತ್ತು ಎಂದು ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಹೇಳಿದ್ದಾರೆ. ಅತ್ಯಾಚಾರ ಸಂತ್ರಸ್ತ ಬಾಲಕಿ ತನ್ನ ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಬಾಲಕಿ ಮತ್ತು ಭ್ರೂಣ ಆರೋಗ್ಯವಾಗಿದ್ದರೆ ಅವರ ಅರ್ಜಿಯನ್ನು ಪುರಸ್ಕರಿಸುವುದಿಲ್ಲ ಎಂದು ಹೇಳಿರುವ ಹೈಕೋರ್ಟ್‌ನ ನ್ಯಾಯಮೂರ್ತಿ ಸಮೀರ್ ದವೆ ಅವರು, ಇದೇ ಸಂದರ್ಭ ಮನುಸ್ಮೃತಿಯನ್ನು ಉಲ್ಲೇಖಿಸಿದ್ದಾರೆ.

ಅತ್ಯಾಚಾರ ಸಂತ್ರಸ್ತೆಗೆ 16 ವರ್ಷ 11 ತಿಂಗಳಾಗಿದ್ದು, ಏಳು ತಿಂಗಳ ಗರ್ಭಿಣಿಯಾಗಿದ್ದಾರೆ. ಗರ್ಭಾವಸ್ಥೆಯು 24 ವಾರಗಳ ಮಿತಿಯನ್ನು ದಾಟಿರುವುದರಿಂದ ಗರ್ಭಪಾತಕ್ಕೆ ಅನುಮತಿ ಕೋರಿ ಆಕೆಯ ತಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಬಾಲಕಿಯ ವಯಸ್ಸು ಅತ್ಯಂತ ಚಿಕ್ಕದಿರುವುದರಿಂದ ಕುಟುಂಬ ವರ್ಗ ಬಹಳ ಆತಂಕದಲ್ಲಿದೆ. ಹೀಗಾಗಿ, ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕೆಂದು ವಕೀಲರು ಮಾಡಿದ ಮನವಿಗೆ ಉತ್ತರಿಸಿದ ನ್ಯಾಯಮೂರ್ತಿಗಳು, ‘ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದೇವೆ. ಅದಕ್ಕೆ ನಿಮಗೆ ಹಾಗೆನಿಸುತ್ತಿದೆ. ನಿಮ್ಮ ತಾಯಿ ಅಥವಾ ಅಜ್ಜಿಯನ್ನು ಕೇಳಿ. ಹದಿನಾಲ್ಕರಿಂದ ಹದಿನೇಳು ಮದುವೆಗೆ ಗರಿಷ್ಠ ವಯಸ್ಸಾಗಿತ್ತು. 17 ವರ್ಷ ತುಂಬುವ ಮೊದಲೇ ಬಾಲಕಿಯರು ತಮ್ಮ ಮೊದಲ ಮಗುವಿಗೆ ಜನ್ಮ ನೀಡುತ್ತಿದ್ದರು. ಬಾಲಕಿಯರು ಬಾಲಕರಿಗಿಂತ ಬೇಗನೆ ಪ್ರೌಢಾವಸ್ಥೆಗೆ ತಲುಪುತ್ತಾರೆ. ನೀವು ಓದಿಲ್ಲವೆಂದಾದರೆ, ಒಮ್ಮೆ ಮನುಸ್ಮೃತಿ ಓದಿ’ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.

ತಮ್ಮ ಕೊಠಡಿಯಲ್ಲೇ ತಜ್ಞ ವೈದ್ಯರ ಸಲಹೆ ಪಡೆದ ನ್ಯಾಯಮೂರ್ತಿ, ಆಗಸ್ಟ್ 16ರಂದು ಬಾಲಕಿಯು ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ ಎಂಬುದರ ಮಾಹಿತಿ ಪಡೆದರು. ಆದರೆ, ಬಾಲಕಿ ಮತ್ತು ಭ್ರೂಣಕ್ಕೆ ಗಂಭೀರ ಆರೋಗ್ಯ ಸಮಸ್ಯೆ ಇದೆ ಎಂಬುದು ಕಂಡುಬಂದರೆ ಮಾತ್ರ ಗರ್ಭಪಾತಕ್ಕೆ ಅನುಮತಿ ನೀಡುತ್ತೇನೆ. ಒಂದೊಮ್ಮೆ, ಆರೋಗ್ಯ ಸ್ಥಿತಿ ಉತ್ತಮವಾಗಿದ್ದರೆ ಅಂತಹ ಆದೇಶ ನೀಡುವುದು ನ್ಯಾಯಾಲಯಕ್ಕೆ ಕಷ್ಟವಾಗಲಿದೆ ಎಂದು ವಕೀಲರಿಗೆ ತಿಳಿಸಿದರು.

ಕೊನೆಗೆ, ಬಾಲಕಿಗೆ ಗರ್ಭಪಾತ ನಡೆಸುವುದು ಸೂಕ್ತವೇ ಎಂಬುದನ್ನು ಕಂಡುಹಿಡಿಯಲು ವೈದ್ಯರ ಸಮಿತಿಯಿಂದ ಬಾಲಕಿಯನ್ನು ಪರೀಕ್ಷಿಸುವಂತೆ ನ್ಯಾಯಾಲಯವು ರಾಜ್‌ಕೋಟ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.