ADVERTISEMENT

ನೋಡಿ: ಧ್ವಜಾರೋಹಣ ಮಾಡುತ್ತಿದ್ದಾಗಲೇ ಸೋನಿಯಾ ಕೈಮೇಲೆ ಬಿದ್ದ ಕಾಂಗ್ರೆಸ್ ಧ್ವಜ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 11:35 IST
Last Updated 28 ಡಿಸೆಂಬರ್ 2021, 11:35 IST
ನವದೆಹಲಿಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ವೇಳೆ ತಮ್ಮ ಕೈ ಮೇಲೆ ಬಿದ್ದ ಪಕ್ಷದ ಧ್ವಜವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಡಿದುಕೊಂಡರು –ಪಿಟಿಐ ಚಿತ್ರ
ನವದೆಹಲಿಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಧ್ವಜಾರೋಹಣ ವೇಳೆ ತಮ್ಮ ಕೈ ಮೇಲೆ ಬಿದ್ದ ಪಕ್ಷದ ಧ್ವಜವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಡಿದುಕೊಂಡರು –ಪಿಟಿಐ ಚಿತ್ರ   

ನವದೆಹಲಿ: ಇಲ್ಲಿನ ಎಐಸಿಸಿಯ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ 137ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ವೇಳೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಧ್ವಜಾರೋಹಣ ನೆರವೇರಿಸುತ್ತಿರುವ ಸಂದರ್ಭದಲ್ಲಿ ಧ್ವಜವು ಬಿಚ್ಚಿಕೊಳ್ಳದೇ ಸೋನಿಯಾ ಅವರ ಕೈಮೇಲೆ ಬಿದ್ದ ಘಟನೆ ಜರುಗಿದೆ.

ಈ ಘಟನೆಯಿಂದ ಸೋನಿಯಾ ಅವರು ತುಸು ವಿಚಲಿತರಾದರು. ತಕ್ಷಣವೇ ಸೋನಿಯಾ, ಪಕ್ಷದ ಖಜಾಂಚಿ ಪವನ್ ಬನ್ಸಾಲ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪಕ್ಷದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಪ್ರದರ್ಶಿಸಿದರು.

ನಂತರ ಪಕ್ಷದ ಕಾರ್ಯಕರ್ತರೊಬ್ಬರು ಧ್ವಜವನ್ನು ಸರಿಯಾಗಿ ಕಟ್ಟಲಾಗಿದೆಯೇ ಎಂದು ಪರೀಕ್ಷಿಸಿದ ಬಳಿಕ ಸೋನಿಯಾ ಎರಡನೇ ಬಾರಿಗೆ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಎ.ಕೆ. ಆ್ಯಂಟನಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆಹಲವರು ಉಪಸ್ಥಿತರಿದ್ದರು.

ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು, ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿ ಇರಬೇಕು ಎಂದು ಆಯೋಜಕರಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.