ADVERTISEMENT

ಬಿಹಾರದಲ್ಲಿ ಗಂಗಾ ನೀರು ಸ್ನಾನಕ್ಕೆ ಯೋಗ್ಯವಲ್ಲ: ವರದಿ

ಪಿಟಿಐ
Published 2 ಮಾರ್ಚ್ 2025, 14:14 IST
Last Updated 2 ಮಾರ್ಚ್ 2025, 14:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಟ್ನಾ: ಬಿಹಾರದಲ್ಲಿ ಗಂಗಾ ನದಿಯ ನೀರು ಬಹುತೇಕ ಕಡೆಗಳಲ್ಲಿ ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು 2024–25ನೆಯ ಸಾಲಿನ ಬಿಹಾರ ಆರ್ಥಿಕ ಸಮೀಕ್ಷೆಯ ವರದಿ ಹೇಳಿದೆ. ಹಾನಿಕಾರಕ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದು ವರದಿ ತಿಳಿಸಿದೆ.

ಬಿಹಾರದ 34 ಕಡೆಗಳಲ್ಲಿ ಗಂಗಾ ನದಿಯ ಗುಣಮಟ್ಟವನ್ನು ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯು (ಬಿಎಸ್‌ಪಿಸಿಬಿ) ಪ್ರತಿ 15 ದಿನಗಳಿಗೊಮ್ಮೆ ಗಮನಿಸುತ್ತಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ಸಮೀಕ್ಷೆಯ ವರದಿಯನ್ನು ಬಿಹಾರ ವಿಧಾನಸಭೆಯಲ್ಲಿ ಈಚೆಗೆ ಮಂಡಿಸಲಾಗಿದೆ. ‘ನದಿ ನೀರಿನ ಗುಣಮಟ್ಟವು, ಅದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಿರುವುದನ್ನು ಸೂಚಿಸುತ್ತಿದೆ. ಗಂಗಾ ನದಿ ಮತ್ತು ಅದರ ಉಪನದಿಗಳ ದಂಡೆಯ ಮೇಲಿರುವ ನಗರಗಳ ಕೊಳಚೆ ನೀರು ಹಾಗೂ ಮನೆಗಳ ತ್ಯಾಜ್ಯ ನೀರನ್ನು ನದಿಗೆ ಬಿಡುತ್ತಿರುವುದು ಇದಕ್ಕೆ ಮುಖ್ಯ ಕಾರಣ’ ಎಂದು ವರದಿ ಹೇಳಿದೆ. ಆದರೆ, ಜಲಚರಗಳಿಗೆ, ಮೀನುಗಾರಿಕೆಗೆ ಮತ್ತು ನೀರಾವರಿಗೆ ಬಳಸಲು ಗಂಗಾ ಮತ್ತು ಅದರ ಉಪನದಿಗಳ ನೀರು ಯೋಗ್ಯವಾಗಿದೆ ಎಂದು ಅದು ಹೇಳಿದೆ.

ADVERTISEMENT

ಗಂಗಾ ನದಿಯಲ್ಲಿ ಬ್ಯಾಕ್ಟೀರಿಯಾ ಪ್ರಮಾಣವು ಹೆಚ್ಚಿರುವುದು ಕಳವಳ ಮೂಡಿಸುವ ಸಂಗತಿ ಎಂದು ಬಿಎಸ್‌ಪಿಸಿಬಿ ಅಧ್ಯಕ್ಷ ಡಿ.ಕೆ. ಶುಕ್ಲಾ ಹೇಳಿದ್ದಾರೆ. ರಾಜ್ಯದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕಗಳು ಸರಿಯಾಗಿ ಕೆಲಸ ಮಾಡುವುದನ್ನು ಖಾತರಿಪಡಿಸಲು ಮಂಡಳಿಯು ಕ್ರಮ ಕೈಗೊಳ್ಳುತ್ತಿದೆ ಎಂದು ಶುಕ್ಲಾ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.