ADVERTISEMENT

ಅಡಿಕೆ ತೋಟ ಉಳಿಸಿಕೊಳ್ಳಲು ಹರಸಾಹಸ!

ತುಂಗಾ, ಭದ್ರಾ ನಾಲೆಗಳಿಂದ ದೊಡ್ಡ ಟ್ಯಾಂಕರ್‌ಗಳ ಮೂಲಕ ನೀರು ಸಾಗಣೆ

ಚಂದ್ರಹಾಸ ಹಿರೇಮಳಲಿ
Published 1 ಏಪ್ರಿಲ್ 2019, 20:00 IST
Last Updated 1 ಏಪ್ರಿಲ್ 2019, 20:00 IST
ಸಾಗರ ರಸ್ತೆಯಲ್ಲಿ ನೀರಿಲ್ಲದೆ ಒಣಗಿದ ಅಡಿಕೆ ತೋಟ
ಸಾಗರ ರಸ್ತೆಯಲ್ಲಿ ನೀರಿಲ್ಲದೆ ಒಣಗಿದ ಅಡಿಕೆ ತೋಟ   

ಶಿವಮೊಗ್ಗ: ಜಿಲ್ಲೆಯ ಹಲವೆಡೆ ನೀರಿನ ಕೊರತೆ ಎದುರಾದ ಪರಿಣಾಮ ಬಿಸಿಲಿನ ತಾಪಕ್ಕೆ ಅಡಿಕೆ ತೋಟಗಳು ಒಣಗುತ್ತಿವೆ. ರೈತರು ದೊಡ್ಡ ದೊಡ್ಡ ಟ್ಯಾಂಕರ್‌ಗಳ ಮೂಲಕ ನೀರು ತಂದು ತೋಟಗಳಿಗೆ ಸುರಿಯುತ್ತಿದ್ದಾರೆ.

ನೂರಾರು ಟ್ಯಾಂಕರ್‌ಗಳು ಹಗಲು, ರಾತ್ರಿ ಎನ್ನದೆ ತುಂಗಾ, ಭದ್ರಾ ನಾಲೆಗಳು, ನೀರಿನ ಲಭ್ಯತೆ ಇರುವ ಜಲಮೂಲಗಳಿಂದ ನೀರು ತುಂಬಿಕೊಂಡು ಹತ್ತಾರು ಕಿ.ಮೀ. ದೂರ ಸಾಗುತ್ತಿವೆ. ಒಣಗುತ್ತಿರುವ ತೋಟಗಳಿಗೆ ನೀರು ಪೂರೈಸುತ್ತಿವೆ. ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಹರಸಾಹಸ ಮಾಡುತ್ತಿದ್ದಾರೆ. ಅದಕ್ಕಾಗಿ ಭದ್ರಾವತಿ, ಚನ್ನಗಿರಿ ತಾಲ್ಲೂಕು ಭಾಗಗಳಲ್ಲಿ ನಾಲೆಗಳ ಉದ್ದಕ್ಕೂ ಡೀಸೆಲ್‌ ಮೋಟರ್, ಪೈಪ್‌ಗಳನ್ನು ಅಳವಡಿಸಲಾಗಿದೆ. ನೀರು ತುಂಬಿಸಿಕೊಳ್ಳಲು ದಿನದ 24 ಗಂಟೆಗಳೂ ಟ್ಯಾಂಕರ್‌ ಲಾರಿಗಳು ಸಾಲುಗಟ್ಟಿ ನಿಂತಿರುತ್ತವೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲ್ಲೂಕಿನ 1,82,818 ಹೆಕ್ಟೇರ್ ಜಮೀನುಗಳಿಗೆ ಭದ್ರಾ ಜಲಾಶಯ ನೀರುಣಿಸುತ್ತದೆ. ಈ ಬಾರಿ ಜಲಾಶಯ ತುಂಬಿದ್ದ ಕಾರಣ ಅಚ್ಚುಕಟ್ಟು ಪ್ರದೇಶದ ತೋಟಗಾರಿಕಾ ಬೆಳೆಗಳಿಗೆ ಅಂತಹ ಸಮಸ್ಯೆ ಎದುರಾಗಿಲ್ಲ. ಅಚ್ಚುಕಟ್ಟು ಪ್ರದೇಶ ಕೊನೆಯ ಭಾಗ ಹಾಗೂ ಕೆರೆ, ಕೊಳವೆಬಾವಿ, ತೆರೆದ ಬಾವಿ ಹಳ್ಳಕೊಳ್ಳಗಳ ಆಶ್ರಿತ ಪ್ರದೇಶದ ಬಹುತೇಕ ತೋಟಗಳು ನೀರಿಲ್ಲದೆ ಒಣಗುತ್ತಿವೆ.

ADVERTISEMENT
ಭದ್ರಾವತಿ ತಾಲ್ಲೂಕು ಸಿದ್ದಾಪುರ ಬಳಿ ಭದ್ರಾ ನಾಲೆಯಿಂದ ಟ್ಯಾಂಕರ್‌ಗಳಿಗೆ ನೀರು ತುಂಬುತ್ತಿರುವುದು (ಎಡಚಿತ್ರ) ಸಾಗರ ರಸ್ತೆ ಬದಿಯಲ್ಲಿ ನೀರಿಲ್ಲದೆ ಒಣಗಿದ ಅಡಿಕೆ ತೋಟ

ಮೂರು ವರ್ಷಗಳ ಹಿಂದೆ ಅಡಿಕೆ ಧಾರಣೆ ಕ್ವಿಂಟಲ್‌ಗೆ ₹ 1 ಲಕ್ಷ ಮುಟ್ಟಿ ಬಂದ ನಂತರ ಅಡಿಕೆ ಬೆಳೆ ಕ್ಷೇತ್ರ ಗಣನೀಯವಾಗಿ ಹೆಚ್ಚಳವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 5 ವರ್ಷಗಳ ಹಿಂದೆ 26 ಸಾವಿರ ಹೆಕ್ಟೇರ್ ಇದ್ದ ಅಡಿಕೆ ಬೆಳೆ ಕ್ಷೇತ್ರ ಇಂದು 80 ಸಾವಿರ ಹೆಕ್ಟೇರ್ ದಾಟಿದೆ. ದಟ್ಟ ಅರಣ್ಯ ಪ್ರದೇಶಗಳ ಮಧ್ಯದಲ್ಲೂ ಹೊಸ ಅಡಿಕೆ ಮರಗಳು ತಲೆಎತ್ತಿವೆ. ಜಲಮೂಲಗಳೇ ಇಲ್ಲದ ಗುಡ್ಡಗಳಲ್ಲೂ ಅಂತರ್ಜಲದ ಮೇಲೆ ಅವಲಂಬಿತವಾಗಿ ಅಡಿಕೆಸಸಿಗಳನ್ನುಬೆಳೆಸಲಾಗಿದೆ. ನೆರೆಯ ದಾವಣಗೆರೆ ಜಿಲ್ಲೆಯಲ್ಲಿ 48 ಸಾವಿರ ಹೆಕ್ಟೇರ್‌ ಅಡಿಕೆ ಪ್ರದೇಶವಿದೆ. ಚನ್ನಗಿರಿ ತಾಲ್ಲೂಕಿನಲ್ಲೇ 36 ಸಾವಿರ ಹೆಕ್ಟೇರ್ ಅಡಿಕೆ ಕ್ಷೇತ್ರವಿದೆ. ಈ ಭಾಗದ ಬಹುತೇಕ ತೋಟಗಳು ಕೊಳವೆಬಾವಿಯ ಅಂತರ್ಜಲ ಅವಲಂಬಿಸಿವೆ.

25 ಸಾವಿರ ಲೀಟರ್‌ ಸಾಮರ್ಥ್ಯದ ಒಂದುಟ್ಯಾಂಕರ್‌ಗೆ ₹ 3 ಸಾವಿರ ನೀಡುತ್ತಿದ್ದಾರೆ. ದೂರ ಹೆಚ್ಚಾದಷ್ಟು ದರವೂ ಹಚ್ಚಳವಾಗುತ್ತದೆ. ಪ್ರತಿಯೊಬ್ಬ ರೈತರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕೃಷಿ ಹೊಂಡ, ತೊಟ್ಟಿ ನಿರ್ಮಿಸಿಕೊಂಡಿದ್ದಾರೆ.ಟ್ಯಾಂಕರ್‌ನಿಂದ ತಂದ ನೀರು ಅಲ್ಲಿ ಸಂಗ್ರಹಿಸುತ್ತಾರೆ.ಮಳೆಅಧಿಕವಾಗಿ ಬೀಳುವತೀರ್ಥಹಳ್ಳಿ, ಹೊಸನಗರ ಭಾಗದಲ್ಲೂ ನೀರಿನ ಕೊರತೆ ಇದೆ. ತೋಟ ಉಳಿಸಿಕೊಳ್ಳಲು ಅಲ್ಲಿನ ರೈತರು ಇಂತಹ ಕಸರತ್ತು ಆರಂಭಿಸಿದ್ದಾರೆ.

‘ಜಿಲ್ಲೆಯ ಹಲವು ನೀರಾವರಿ ಯೋಜನೆಗಳಿಗೆ ಸಮ್ಮಿಶ್ರ ಸರ್ಕಾರ ಈ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದೆ. ತಕ್ಷಣ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಬೇಕು. ಎಲ್ಲ ಕೆರೆ, ಕಟ್ಟೆ ತುಂಬಿಸುವ ಶಾಶ್ವತ ನೀರಾವರಿ ಯೋಜನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಅನುಷ್ಠಾನಗೊಳ್ಳಬೇಕು’ ಎನ್ನುತ್ತಾರೆ ಸೊರಬ ತಾಲ್ಲೂಕಿನ ನಾಗರಾಜ ಬಲೀಂದ್ರ ನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.