ADVERTISEMENT

ವಯನಾಡ್‌: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೊದಲ ಡೋಸ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 10:45 IST
Last Updated 16 ಆಗಸ್ಟ್ 2021, 10:45 IST
ವೀಣಾ ಜಾರ್ಜ್
ವೀಣಾ ಜಾರ್ಜ್   

ತಿರುವನಂತಪುರ: ಕೇರಳದ ವಯನಾಡ್ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ವಯಸ್ಕರಿಗೂ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ವಿತರಿಸಲಾಗಿದೆ.

‘18 ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ವಿತರಿಸಿದ ಕೇರಳದ ಮೊದಲ ಜಿಲ್ಲೆ ವಯನಾಡ್ ಆಗಿದೆ. ಲಸಿಕೆ ವಿತರಣೆ ಪ್ರಕ್ರಿಯೆಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರ ಪರಿಶ್ರಮ, ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ’ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಪಿಟಿಐಗೆ ತಿಳಿಸಿದರು.

‘ವಯನಾಡಿನಲ್ಲಿ ವಿಶೇಷವಾಗಿ ಬುಡಕಟ್ಟು ಜನಸಂಖ್ಯೆ ಹೆಚ್ಚು. ಹಾಗಾಗಿ ಬುಡಕಟ್ಟು ಜನರು ಹೆಚ್ಚಿರುವ ಕುಗ್ರಾಮಗಳಲ್ಲಿ ಲಸಿಕೆ ವಿತರಿಸಲು 28 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಹಾಸಿಗೆ ಹಿಡಿದ 636 ರೋಗಿಗಳ ಮನೆಗಳಿಗೆ ತೆರಳಿ, ಲಸಿಕೆಯನ್ನು ನೀಡಿವೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಈಗಾಗಲೇ ಈ ಜಿಲ್ಲೆಯಲ್ಲಿ 2,13,311 ಮಂದಿಗೆ (ಶೇಕಡ 31.67) ಲಸಿಕೆಯ ಎರಡನೇ ಡೋಸ್‌ ನೀಡಲಾಗಿದೆ. ಭಾನುವಾರದ ವೇಳೆಗೆ 45 ಮೇಲ್ಪಟ್ಟ ಎಲ್ಲರಿಗೂ ಲಸಿಕೆಯ ಮೊದಲ ಡೋಸ್‌ ಅನ್ನು ನೀಡಲಾಗಿತ್ತು. ಈ ಮೈಲಿಗಲ್ಲು ಸಾಧಿಸುವಲ್ಲಿ ನಾಗರಿಕ ಸಂಸ್ಥೆಗಳು, ಬುಡಕಟ್ಟು ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕಾರ್ಮಿಕ ಇಲಾಖೆ, ಕುಟುಂಬಶ್ರೀ ಮಿಷನ್‌ನ ಸದಸ್ಯರುಗಳು ಮತ್ತು ಆಶಾ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಅವರು ಹೇಳಿದರು.

‘ವಯನಾಡ್ ಜಿಲ್ಲೆಯಲ್ಲಿ 6,16,112 ಮಂದಿಗೆ ಮೊದಲ ಡೋಸ್‌ ನೀಡಲಾಗಿದೆ. ಆದರೆ ಕೋವಿಡ್‌ ಸೋಂಕು ದೃಢಪಟ್ಟ ವ್ಯಕ್ತಿಗಳು, ಪ್ರತ್ಯೇಕ ವಾಸದಲ್ಲಿರುವವರು ಮತ್ತು ಲಸಿಕೆ ಪಡೆಯಲು ಬಯಸದವರಿಗೆ ‌ಲಸಿಕಾ ಅಭಿಯಾನದಿಂದ ವಿನಾಯತಿ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.