ಭೂಕುಸಿತದ ಜತೆಗೂ ಬಂಡೆಗಳು ಉರುಳಿ ಭೂಮೇಲ್ಮೈಯೇ ಬದಲಾಗಿರುವ ಚೂರಲ್‌ಮಲ ಗ್ರಾಮದಲ್ಲಿ ರಕ್ಷಣಾ ಕಾರ್ಯ ಬಿರುಸಿನಿಂದ ನಡೆದಿರುವುದು
-ಪಿಟಿಐ ಚಿತ್ರ
ವಯನಾಡ್, ಕೇರಳ: ಪ್ರಕೃತಿ ಮುನಿಸಿನಿಂದಾಗಿ ನಿಂತ ನೆಲವೇ ಕುಸಿದ ‘ದೇವರ ನಾಡಿ’ನಲ್ಲಿ ಈಗ ಚಿಂತೆಯೇ ಗುಡ್ಡವಾಗುತ್ತಿದೆ. ಎಲ್ಲವನ್ನೂ ಆಪೋಶನ ಪಡೆದು ತಣ್ಣಗೆ, ಆದರೆ ರಭಸದಿಂದ ಹರಿಯುತ್ತಿರುವ ನದಿ ದಂಡೆಯಗುಂಟ ಎತ್ತ ಹೆಜ್ಜೆ ಹಾಕಿದರೂ ನೋವಿನ ನೋಟಗಳೇ ಕಣ್ಣಿಗೆ ಬೀಳುತ್ತಿವೆ. ಬೆಟ್ಟದ ಜೀವಗಳ ಆಕ್ರಂದನದ ಸದ್ದು, ರಭಸದಿಂದ ಹರಿಯುತ್ತಿರುವ ನೀರಿನ ಭೋರ್ಗರೆತವನ್ನೂ ಮೀರಿ ಕೇಳಿಸುತ್ತಿದೆ.
ಇದು ಪ್ರಕೃತಿಯ ಸೊಬಗನ್ನೇ ಹೊದ್ದುಕೊಂಡಿದ್ದ ಕೇರಳದ ವಯನಾಡ್ ಜಿಲ್ಲೆಯ, ಈಗ ಬಹುತೇಕ ನಾಮಾವಶೇಷವೇ ಆಗಿರುವ ನಾಲ್ಕು ಗ್ರಾಮಗಳ ಸದ್ಯದ ಚಿತ್ರಣ. ಬಹು ಹಂತದಲ್ಲಿ ಕುಸಿದ ಗುಡ್ಡಗಳ ನಡುವೆ ಹಲವರ ಬದುಕು, ಅವರ ಕನಸುಗಳು ಸಮಾಧಿಯಾಗಿವೆ. ಉಳಿದದ್ದು ಬಯಲು ಮಾತ್ರ.
ದುರಂತ ಸಂಭವಿಸಿದ 48 ಗಂಟೆಗಳ ನಂತರವೂ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ಸಾಗುತ್ತಿದೆ. ಅಷ್ಟೇ ಬಿರುಸಾಗಿ ಹರಿಯುತ್ತಿರುವ ನದಿ, ರಕ್ಷಣಾ ಸಿಬ್ಬಂದಿಗೆ ಹೆಚ್ಚಿನ ಸವಾಲೊಡ್ಡುತ್ತಿದೆ. ರಕ್ಷಣೆಗೆ ಸೇನೆ, ನೌಕಾಪಡೆ ನೆರವು ಪಡೆಯಲಾಗಿದೆ. ಎನ್‌ಡಿಆರ್‌ಎಫ್ ತಂಡವೂ ಜೊತೆಗೂಡಿದೆ. ಸ್ಥಳೀಯರು ಸಹ ಕೈಜೋಡಿಸಿದ್ದಾರೆ.
ಭಾರಿ ಮಳೆಯಿಂದಾಗಿ ವಯನಾಡ್‌ನಲ್ಲಿ ಸಂಭವಿಸಿದ್ದ ಭೂಕುಸಿತ, ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 158ಕ್ಕೆ ಏರಿದೆ. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 180ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.
ಬೆಟ್ಟ ಪ್ರದೇಶಗಳ ನಡುವೆ ಇದ್ದ ಮುಂಡಕ್ಕೈ, ಚೂರಲ್‌ಮಲ, ಅಟ್ಟಮಲ, ನೂಲ್ಪುಳ ಗ್ರಾಮಗಳು ಗುಡ್ಡ ಕುಸಿತದಿಂದ ಧರೆಶಾಹಿಯಾಗಿವೆ.
ನಿರಂತರವಾಗಿ ಸುರಿಯುತ್ತಿರುವ ಮಳೆ, ಎಲ್ಲೆಂದರಲ್ಲಿ ಹರಡಿರುವ ಕೆಸರು, ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕಾದಂತೆ ಜಾರುತ್ತಿರುವ ನೆಲ ಹಾಗೂ ಇದರ ಜೊತೆಗೆ ರಭಸದಿಂದ ಹರಿಯುತ್ತಿರುವ ನದಿ – ಈ ಎಲ್ಲವೂ ರಕ್ಷಣಾ ಕಾರ್ಯಗಳಿಗೆ ಸವಾಲೊಡ್ಡಿವೆ. ಪ್ರತಿಸವಾಲು ಎಂಬಂತೆ ರಕ್ಷಣಾ ಕಾರ್ಯ ವೇಗವಾಗಿ ನಡೆದಿದೆ.
ಭೂಕುಸಿತ ಹಾಗೂ ಪ್ರವಾಹಕ್ಕೆ ಸಿಕ್ಕಿ ನಾಪತ್ತೆಯಾದವರು ಹಾಗೂ ಅವಶೇಷಗಳ ನಡುವೆ ಬದುಕುಳಿದವರ ಪತ್ತೆಗೆ ಶೋಧ ಕಾರ್ಯ ಚುರುಕಾಗಿ ನಡೆದಿದೆ. ಕುಸಿದ ಮನೆಗಳ ಅವಶೇಷಗಳು, ಪ್ರವಾಹದಲ್ಲಿ ಕೊಚ್ಚಿ ಗುಡ್ಡೆಯಾಗಿರುವ ಮರ, ಗಿಡ ಕೊಂಬೆಗಳ ರಾಶಿಗಳು ಕೂಡ ಕಾರ್ಯಾಚರಣೆಗೆ ಅಡೆತಡೆ ಒಡ್ಡುತ್ತಿವೆ.
ಕುಸಿದ ಮನೆಗಳ ಅವಶೇಷ, ನಿವಾಸಿಗಳನ್ನು ಜೀವಂತವಾಗೇ ಸಮಾಧಿಯಾಗಿಸಿದ ಕುಸಿದ ಗುಡ್ಡ, ಮಣ್ಣಿನ ರಾಶಿಯು ಒಂದು ಕಡೆ ಬದುಕಿ ಉಳಿದವರಲ್ಲೂ ಭೀತಿಯನ್ನು ಮೂಡಿಸುತ್ತಿದೆ. ಸಂಬಂಧಿಕರನ್ನು ನೋಡುವ ಇವರ ನಿರೀಕ್ಷೆ ತಣಿಸಲು, ಅವಶೇಷಗಳನ್ನು ಒಡೆದು ಬದುಕುಳಿದವರಿಗಾಗಿ ಹುಡುಕಾಟ ನಡೆದಿದೆ.
ವಯನಾಡ್ ಜಿಲ್ಲಾಡಳಿತದ ಪ್ರಕಾರ, ಕೆಸರು, ಅವಶೇಷಗಳ ನಡುವೆ ಹಲವರು ಸಿಲುಕಿರುವ ಸಾಧ್ಯತೆ ಇದೆ. ಮೃತರ ಸಂಖ್ಯೆ ಇನ್ನಷ್ಟು ಏರಬಹುದು. ಅಂದಾಜು 200 ಜನರು ನಾಪತ್ತೆಯಾಗಿದ್ದಾರೆ. 300 ಮನೆಗಳು ಪೂರ್ಣ ನಾಶವಾಗಿವೆ. ಚೂರಲ್‌ಮಲ, ಮುಂಡಕ್ಕೈ ಗ್ರಾಮಗಳಲ್ಲಿ ಗುಡ್ಡಕುಸಿತದ ಪರಿಣಾಮ ತೀವ್ರವಾಗಿದೆ.
ಮೃತಪಟ್ಟವರಲ್ಲಿ 123 ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 75 ಶವಗಳ ಗುರುತು ಪತ್ತೆಯಾಗಿದೆ. ಪತ್ತೆಯಾದ ಶವಗಳನ್ನು ಮೇಪ್ಪಾಡಿಯ ಸಮುದಾಯ ಆರೋಗ್ಯ ಕೇಂದ್ರ ಹಾಗೂ ನಿಲಂಬೂರ್ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ ಎಂದು ಜಿಲ್ಲಾಡಳಿತವು ತಿಳಿಸಿದೆ.
ಅಂಕಿ–ಅಂಶ ಸಂಗ್ರಹ: ಈ ಮಧ್ಯೆ, ಅವಘಡದಲ್ಲಿ ಮೃತಪಟ್ಟವರು, ನಾಪತ್ತೆಯಾದವರ ಖಚಿತ ಮಾಹಿತಿಗಾಗಿ ನಿವಾಸಿಗಳ ಹೆಸರು, ಅಂಕಿ ಅಂಶಗಳನ್ನು ಸಂಗ್ರಹಿಸಲು ಜಿಲ್ಲಾಡಳಿತ ಮುಂದಾಗಿದೆ. ಮಾಹಿತಿ ಕಲೆಹಾಕಲು ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ರಕ್ಷಣಾ ಇಲಾಖೆಯ ಹೇಳಿಕೆಯ ಪ್ರಕಾರ, ಮಂಗಳವಾರ ರಾತ್ರಿಯಿಂದ ಬಾಧಿತ ಗ್ರಾಮಗಳಿಂದ ಸುಮಾರು ಒಂದು ಸಾವಿರ ಜನರನ್ನು ರಕ್ಷಿಸಲಾಗಿದೆ. ಸೇನೆಯು ಬಾಧಿತ ಪ್ರದೇಶಗಳ ವ್ಯಾಪ್ತಿಯಲ್ಲಿ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದು, ರಕ್ಷಣೆಯಲ್ಲಿ ತೊಡಗಿರುವ ತಂಡಗಳ ಜೊತೆಗೆ ಪೂರಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ.
ಭಾರಿ ಮಳೆ ಕಾರಣ ಸರಣಿ ಭೂಕುಸಿತ ಕಂಡ ಚೂರಲ್‌ಮಲ ಗ್ರಾಮದ ಬುಧವಾರ ಕಂಡದ್ದು ಹೀಗೆ
ಚೂರಲ್‌ಮಲ ಗ್ರಾಮದಲ್ಲಿ ರಭಸದಿಂದ ಹರಿಯುತ್ತಿರುವ ನದಿಯ ನಡುವೆ ರಕ್ಷಣಾ ಸಿಬ್ಬಂದಿಯು ಬಾಧಿತರನ್ನು ದಡ ತಲುಪಿಸಿದರು
ಬಾಧಿತ ಗ್ರಾಮಗಳಿಂದ 5500ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. 8000 ಜನರಿಗೆ 82 ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ. 144 ಶವಗಳು ಪತ್ತೆಯಾಗಿದ್ದು 191ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಕೇರಳ
ಭೂಕುಸಿತ ಸಾಧ್ಯತೆ ಕುರಿತು ಕೇರಳ ಸರ್ಕಾರಕ್ಕೆ ಜುಲೈ 23ರ ನಂತರ ನಾಲ್ಕು ಬಾರಿ ಎಚ್ಚರಿಕೆ ಸಂದೇಶ ನೀಡಲಾಗಿತ್ತು. ಆದರೆ ಕೇರಳ ಸರ್ಕಾರ ಮುನ್ನೆಚ್ಚರಿಕೆ ವಹಿಸಲಿಲ್ಲ. ಕೇಂದ್ರದ ಎಚ್ಚರಿಕೆಗೆ ಸ್ಪಂದಿಸಿದ್ದ ಇತರೆ ರಾಜ್ಯಗಳಲ್ಲಿ ಯಾವುದೇ ಅನಾಹುತವಾಗಿಲ್ಲ.ಅಮಿತ್ ಶಾ ಕೇಂದ್ರ ಗೃಹ ಸಚಿವ
ಸಂಕಷ್ಟ ಕಾಲದಲ್ಲಿ ವಯನಾಡ್‌ನ ಜನತೆಗೆ ಎಲ್ಲ ಅಗತ್ಯ ನೆರವು ನೀಡಬೇಕು. ಭೂಕುಸಿತವು ಪರಿಸರಕ್ಕೆ ಸಂಬಂಧಿತ ವಿಷಯ. 5 ವರ್ಷದ ಬಳಿಕ ಮತ್ತೆ ಸಂಭವಿಸಿದೆ. ಭವಿಷ್ಯದಲ್ಲಿ ಇಂತಹದ್ದನ್ನು ತಡೆಯಲು ಹೈ–ಟೆಕ್ ಪರಿಹಾರಕ್ರಮಕ್ಕೆ ಕೇಂದ್ರ ಸರ್ಕಾರ ಒತ್ತು ನೀಡಬೇಕು.ರಾಹುಲ್‌ಗಾಂಧಿ ಲೋಕಸಭೆಯ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.