ADVERTISEMENT

ಎನ್‌ಐಎನಿಂದ ವಾಜೆ ಬಂಧನ ಮಹಾರಾಷ್ಟ್ರ ಪೊಲೀಸರಿಗೆ ಅವಮಾನ: ಶಿವಸೇನಾ

ಪಿಟಿಐ
Published 15 ಮಾರ್ಚ್ 2021, 11:07 IST
Last Updated 15 ಮಾರ್ಚ್ 2021, 11:07 IST
ಶಿವಸೇನಾ
ಶಿವಸೇನಾ   

ಮುಂಬೈ: ‘ಮುಂಬೈ ಪೊಲೀಸ್‌ ಅಧಿಕಾರಿ ಸಚಿನ್‌ ವಾಜೆ ಅವರನ್ನು ಎನ್‌ಐಎ ಬಂಧಿಸಿದ್ದು ಇದು ಮಹಾರಾಷ್ಟ್ರ ಪೊಲೀಸರಿಗೆ ಮಾಡಿದ ಅವಮಾನ. ಸಚಿನ್‌ ವಾಜೆ ಅವರನ್ನು ಉದ್ದೇಶಪೂರ್ವಕವಾಗಿ ಬಂಧಿಸಲಾಗಿದೆ’ ಎಂದು ಶಿವಸೇನಾ ಆರೋಪಿಸಿದೆ.

ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ, ಸಚಿನ್‌ ವಾಜೆ ಅವರನ್ನು ಶನಿವಾರ ಬಂಧಿಸಿತ್ತು.

‘ಮುಂಬೈ ಪೊಲೀಸರ ತನಿಖಾ ಸಾಮರ್ಥ್ಯ ಮತ್ತು ಧೈರ್ಯಕ್ಕೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಹೀಗಿರುವಾಗ ಈ ಪ್ರಕರಣವನ್ನು ಎನ್‌ಐಎಗೆ ನೀಡಿರುವುದು ನಿಜಕ್ಕೂ ಆಶ್ಚರ್ಯಕರ’ ಎಂದು ಶಿವಸೇನಾ ಪಕ್ಷದ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಹೇಳಲಾಗಿದೆ.

ADVERTISEMENT

‘ಒಂದು ವೇಳೆ ಸಚಿನ್‌ ವಾಜೆ ತಪ್ಪಿತಸ್ಥರಾಗಿದ್ದಲ್ಲಿ ಮುಂಬೈ ಪೊಲೀಸ್‌ ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳಕ್ಕೆ(ಎಟಿಎಸ್‌) ಅವರ ವಿರುದ್ಧ ಕ್ರಮಕೈಗೊಳ್ಳುವ ಸಾಮರ್ಥ್ಯವಿದೆ. ಆದರೆ ಕೇಂದ್ರ ತನಿಖಾ ದಳ ಇದನ್ನು ಬಯಸಿರಲಿಲ್ಲ’ ಎಂದು ಸಂಪಾದಕೀಯದಲ್ಲಿ ದೂರಲಾಗಿದೆ.

‘ಅನ್ವಯ್‌ ನಾಯ್ಕ್‌ ಆತ್ಮಹತ್ಯೆ ಪ್ರಕರಣದಡಿ ಪತ್ರಕರ್ತ ಅರ್ನಬ್‌ ಗೋಸ್ವಾಮಿ ಅವರನ್ನು ಸಚಿನ್‌ ವಾಜೆ ಬಂಧಿಸಿದ್ದರು. ಅಂದಿನಿಂದ ಬಿಜೆಪಿ ಮತ್ತು ಕೇಂದ್ರ ಸರ್ಕಾರವು ಸಚಿನ್‌ ವಾಜೆಯನ್ನು ಗುರಿಯಾಗಿಸಿಕೊಂಡಿದೆ’ ಎಂದು ‘ಸಾಮ್ನಾ’ ಪತ್ರಿಕೆಯಲ್ಲಿ ಆರೋಪಿಸಲಾಗಿದೆ.

2018ರ ಒಳಾಂಗಣ ವಿನ್ಯಾಸಕಾರ (ಇಂಟೀರಿಯರ್‌ ಡಿಸೈನರ್‌) ಅನ್ವಯ್‌ ನಾಯ್ಕ್‌ ಮತ್ತು ಅವರ ತಾಯಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ನವೆಂಬರ್‌ 4 ರಂದು ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ಸೇರಿದಂತೆ ಮೂವರನ್ನು ರಾಯಗಡ್‌ ಪೊಲೀಸರು ಬಂಧಿಸಿದ್ದರು.

ಬಂಧನಕ್ಕೊಳಗಾದ ಕೆಲವೇ ದಿನಗಳಲ್ಲಿ ಸುಪ್ರೀಂಕೋರ್ಟ್‌ ಅವರಿಗೆ ಜಾಮೀನು ಕೂಡ ಮಂಜೂರು ಮಾಡಿತ್ತು.

ವಾಜೆ ಅವರು ಈವರೆಗೆ ಒಟ್ಟು 63 ಎನ್‌ಕೌಂಟರ್‌ಗಳನ್ನು ಮಾಡಿದ್ದಾರೆ. ಅಂಬಾನಿ ಮನೆ ಮುಂದೆ ಪತ್ತೆಯಾದ ಕಾರಿನ ಮಾಲೀಕ ಮುನ್‌ಸುಖ್‌ ಹಿರೇನ್ ಹತ್ಯೆಯ ಆರೋಪ ಕೂಡ ಸಚಿನ್‌ ವಾಜೆ ಮೇಲಿದೆ.

‘ಈ ಪ್ರಕರಣದಲ್ಲಿ ಸತ್ಯ ಬೆಳಕಿಗೆ ಬರುತ್ತದೆ ಎಂಬ ನಿರೀಕ್ಷೆಯಿದೆ’ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.

‘ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣ ಮತ್ತು ಹಿರೇನ್ ಹತ್ಯೆ ಪ್ರಕರಣವನ್ನು ಎಟಿಎಸ್‌ಗೆ ನೀಡಲಾಗಿತ್ತು. ಆದರೆ ಕೇಂದ್ರ ಸರ್ಕಾರವು ಈ ಪ್ರಕರಣವನ್ನು ಎನ್‌ಐಎಗೆ ನೀಡಿತು. ಆದರೆ ಈ ಪ್ರಕರಣಗಳನ್ನು ತರಾತುರಿಯಲ್ಲಿ ಹಸ್ತಾಂತರಿಸುವ ಅಗತ್ಯವಿರಲಿಲ್ಲ’ ಎಂದು ಶಿವಸೇನಾ ಹೇಳಿದೆ.

‘ಪುಲ್ವಾಮ ದಾಳಿಯಲ್ಲಿ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು. ಆದರೆ ಈ ದಾಳಿಗೆ ಬಳಸಲಾದ ಸ್ಫೋಟಕಗಳು ಪುಲ್ವಾಮಗೆ ಹೇಗೆ ತಲು‍ಪಿದೆ ಎಂಬುದು ರಹಸ್ಯವಾಗಿಯೇ ಉಳಿದಿದೆ. ಕಾಶ್ಮೀರದ ಕಣಿವೆಯಲ್ಲಿ ಪ್ರತಿನಿತ್ಯ ಸ್ಫೋಟಕಗಳು ಪತ್ತೆಯಾಗುತ್ತದೆ. ಅವುಗಳ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆಯೇ’ ಎಂದು ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.