ADVERTISEMENT

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮೇಲೆ ವಿಶ್ವಾಸ ಇದೆ: ಕಾಂಗ್ರೆಸ್‌

ಪಿಟಿಐ
Published 23 ಜೂನ್ 2022, 14:20 IST
Last Updated 23 ಜೂನ್ 2022, 14:20 IST
ಗೌರವ್‌ ಗೊಗೊಯಿ
ಗೌರವ್‌ ಗೊಗೊಯಿ   

ನವದೆಹಲಿ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾವಿಕಾಸ್‌ ಆಘಾಡಿಯಲ್ಲಿ (ಎಂವಿಎ) ಬಿಕ್ಕಟ್ಟು ಕಂಡುಬಂದಿರುವ ಬೆನ್ನಲ್ಲೇ, ಮೈತ್ರಿಕೂಟದ ಅಂಗಪಕ್ಷವಾದ ಕಾಂಗ್ರೆಸ್‌ ಎಚ್ಚರಿಕೆಯ ಹೆಜ್ಜೆಯಿಟ್ಟಿದೆ.

‘ಶಿವಸೇನಾದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಲ್ಲಿ ಪಕ್ಷ ವಿಶ್ವಾಸ ಹೊಂದಿದೆ’ ಎಂದು ಗುರುವಾರ ಹೇಳಿದೆ.

‘ಎಂವಿಎ ನೇತೃತ್ವದ ಸರ್ಕಾರವನ್ನು ಉರುಳಿಸಬೇಕು ಎಂಬ ಬಿಜೆಪಿ ಯತ್ನ ಕೈಗೂಡುವುದಿಲ್ಲ’ ಎಂದೂ ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ.

ADVERTISEMENT

ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಹಾಗೂ ಮುಖ್ಯಮಂತ್ರಿ ಸ್ಥಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ವಕ್ತಾರ ಗೌರವ್‌ ಗೊಗೊಯಿ, ‘ನಮ್ಮ ನಿಲುವುಗಳನ್ನು ಶಿವಸೇನಾ ಮೇಲೆ ಹೇರಲು ಹೋಗುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಇದು ಆ ಪಕ್ಷದ ಆಂತರಿಕ ವಿಷಯ’ ಎಂದು ಪ್ರತಿಕ್ರಿಯಿಸಿದರು.

‘ರಾಜಕೀಯ ಅಸ್ಥಿರತೆಯನ್ನುಂಟು ಮಾಡುವ ಬಿಜೆಪಿಯ ಹುನ್ನಾರಕ್ಕೆ ಇದು ಮತ್ತೊಂದು ನಿದರ್ಶನ’ ಎಂದರು.

‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು, ಯುವಕರು ಬೀದಿಗಿಳಿದಿದ್ದಾರೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ, ಕೆಲವೆಡೆ ಪ್ರವಾಹ ಕಂಡುಬಂದಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಅಧಿಕಾರಕ್ಕಾಗಿ ಬಿಜೆಪಿಯ ದಾಹ ಮತ್ತೊಮ್ಮೆ ಬಹಿರಂಗವಾಗಿದೆ’ ಎಂದೂ ಅವರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.