ADVERTISEMENT

‘ನೂರು ದಿನಗಳಲ್ಲಿ ದೊಡ್ಡ ಬದಲಾವಣೆ’

ದಿಟ್ಟ ತೀರ್ಮಾನಗಳಿಗೆ 130 ಕೋಟಿ ಜನರೇ ಸ್ಫೂರ್ತಿ: ಪ್ರಧಾನಿ ಮೋದಿ

ಪಿಟಿಐ
Published 8 ಸೆಪ್ಟೆಂಬರ್ 2019, 20:00 IST
Last Updated 8 ಸೆಪ್ಟೆಂಬರ್ 2019, 20:00 IST
ರೋಹ್ಟಕ್‌ನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿಗೆ ಪೇಟ ತೊಡಿಸಿದ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಪಿಟಿಐ ಚಿತ್ರ
ರೋಹ್ಟಕ್‌ನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿಗೆ ಪೇಟ ತೊಡಿಸಿದ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಪಿಟಿಐ ಚಿತ್ರ   

ರೋಹ್ಟಕ್‌ (ಹರಿಯಾಣ) : ‘ಕೇಂದ್ರ ಸರ್ಕಾರವು ದೇಶದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡುವ ಮೂಲಕ ನೂರು ದಿನಗಳಲ್ಲಿ ಜನರ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಸವಾಲುಗಳನ್ನು ಎದುರಿಸುವುದು ಹೇಗೆ ಎಂಬುದು ನಮಗೆ ತಿಳಿದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಹರಿಯಾಣ ವಿಧಾನಸಭೆಗೆ ನಡೆಯಲಿರುವ ಚುನಾವಣೆಯ ಪ್ರಚಾರ ರ್‍ಯಾಲಿಯೊಂದರಲ್ಲಿ ಮಾತನಾಡುತ್ತಾ ಕೇಂದ್ರ ಸರ್ಕಾರವು ನೂರು ದಿನಗಳನ್ನು ಪೂರೈಸುತ್ತಿರುವುದನ್ನು ಉಲ್ಲೇಖಿಸಿದ ಅವರು, ‘ಕೃಷಿ ಕ್ಷೇತ್ರದಿಂದ ಹಿಡಿದು ರಾಷ್ಟ್ರೀಯ ಭದ್ರತೆವರೆಗಿನ ಅನೇಕ ವಿಚಾರಗಳಲ್ಲಿ ಸರ್ಕಾರವು ದಿಟ್ಟ ತೀರ್ಮಾನಗಳನ್ನು ಕೈಗೊಂಡಿದೆ. ಇಂಥ ಬಹುದೊಡ್ಡ ತೀರ್ಮಾನಗಳ ಹಿಂದೆ ದೇಶದ 130 ಕೋಟಿ ಜನರ ಸ್ಫೂರ್ತಿ ಇದೆ. ವಿರೋಧಪಕ್ಷಗಳಿಗೆ ಇನ್ನೂ ಲೋಕಸಭಾ ಚುನಾವಣೆಯ ಸೋಲಿನ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.

‘ಈ ನೂರು ದಿನಗಳು ಒಳ್ಳೆಯ ಉದ್ದೇಶ, ಸಮರ್ಪಣಾ ಭಾವದ ನಿರ್ಣಾಯಕ ದಿನಗಳಾಗಿದ್ದವು. ಭಾರತವು ಪ್ರತಿ ಸವಾಲಿಗೂ ಸವಾಲು ಒಡ್ಡುತ್ತಿರುವುದನ್ನು ಕಳೆದ ನೂರು ದಿನಗಳಲ್ಲಿ ಜಗತ್ತೇ ನೋಡಿದೆ. ಭಯೋತ್ಪಾದನೆ ತಡೆಗೆ ಕ್ರಮ, ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ಸೇರಿದಂತೆ ಅನೇಕ ಪ್ರಮುಖ ವಿಚಾರಗಳ ಬಗ್ಗೆ ಕಾನೂನುಗಳನ್ನು ರೂಪಿಸಲಾಗಿದೆ ಎಂದರು.

ADVERTISEMENT

‘ದೇಶದ ಅರ್ಥವ್ಯವಸ್ಥೆಯನ್ನು ಗಟ್ಟಿಗೊಳಿಸಲು ಅನೇಕ ಕ್ರಮಗಳನ್ನು ರೂಪಿಸಲಾಗಿದೆ’ ಎಂದ ಮೋದಿ, ಬ್ಯಾಂಕಿಂಗ್‌ ಕ್ಷೇತ್ರದ ಅಭಿವೃದ್ಧಿಗಾಗಿ ಕೈಗೊಂಡ ಯೋಜನೆಗಳನ್ನು ಪ್ರಸ್ತಾಪಿಸಿದರು. ‘ಇದು ಆರಂಭವಷ್ಟೇ, ಇದರ ಫಲವನ್ನು ಮುಂದಿನ ದಿನಗಳಲ್ಲಿ ದೇಶದ ಜನರು ಅನುಭವಿಸಲಿದ್ದಾರೆ’ ಎಂದರು.

‘ಯಾವುದೇ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವುದರಲ್ಲಿ ನಮಗೆ ವಿಶ್ವಾಸವಿಲ್ಲ. ದೊಡ್ಡ ಗುರಿಯನ್ನಿಟ್ಟುಕೊಂಡು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ. ನೀರಿನ ಸಮಸ್ಯೆ ಮತ್ತು ಜಮ್ಮು ಕಾಶ್ಮೀರ ಸಮಸ್ಯೆಗಳನ್ನು ಹೊಸ ದೃಷ್ಟಿಕೋನದಿಂದ ನೋಡಬೇಕು ಎಂದು ಜನರು ಬಯಸುತ್ತಿದ್ದರು. ಹಾಗೇ ಮಾಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಿಂದಿನ ಯಾವ ಸರ್ಕಾರವೂ ಮಾಡದಂಥ ಕಾರ್ಯವನ್ನು ಈ ಸರ್ಕಾರ ಮಾಡಲಿದೆ. ಅದಕ್ಕಾಗಿ ಯೋಜನೆ ರೂಪಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಮತ್ತು ಸುಲಭವಾಗಿ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ’ ಎಂದರು.

ರಿಪೋರ್ಟ್‌ ಕಾರ್ಡ್‌: ಮುಂದಿನ ಎರಡು ದಿನಗಳಲ್ಲಿ ಕೇಂದ್ರದ ಎಲ್ಲಾ ಸಚಿವರು ಮಾಧ್ಯಮಗೋಷ್ಠಿಗಳನ್ನು ಆಯೋಜಿಸಿ, ತಮ್ಮ ಸಚಿವಾಲಯವು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸರ್ಕಾರವಾಗಲಿ ಬಿಜೆಪಿಯಾಗಲಿ ಯಾವುದೇ ಮಾಹಿತಿ ನೀಡಿಲ್ಲ.

ಅಭಿವೃದ್ಧಿರಹಿತ ದಿನಗಳು: ರಾಹುಲ್

ನೂರು ದಿನಗಳನ್ನು ಪೂರೈಸುತ್ತಿರುವ ಸರ್ಕಾರವನ್ನು ಟ್ವಿಟರ್‌ ಮೂಲಕ ಟೀಕೆಗೆ ಗುರಿ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಅಭಿವೃದ್ಧಿರಹಿತವಾದ ನೂರು ದಿನಗಳನ್ನು ಪೂರೈಸಿರುವ ಸರ್ಕಾರಕ್ಕೆ ಅಭಿನಂದನೆಗಳು’ ಎಂದಿದ್ದಾರೆ.

‘ನಾಶವಾಗುತ್ತಿರುವ ಅರ್ಥವ್ಯವಸ್ಥೆಯನ್ನು ಸರಿಪಡಿಸಲು ಬಲಿಷ್ಠ ನಾಯಕತ್ವ ಮತ್ತು ಯೋಜನೆಯ ಅಗತ್ಯವಿದೆ. ವಿಧೇಯ ಮಾಧ್ಯಮಗಳನ್ನು ಬಳಸಿಕೊಂಡು, ತಮ್ಮ ಕೊರತೆಗಳನ್ನು ಮುಚ್ಚಿಡುತ್ತಾ ಪೂರೈಸಿದ ಅಭಿವೃದ್ಧಿರಹಿತ ನೂರು ದಿನಗಳಿಗಾಗಿ ಮೋದಿ ಸರ್ಕಾರಕ್ಕೆ ಅಭಿನಂದನೆಗಳು’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

"ಮೋದಿ ನೇತೃತ್ವದ ಸರ್ಕಾರವು ರಾಷ್ಟ್ರೀಯ ಭದ್ರತೆ, ಅಭಿವೃದ್ಧಿ ಮತ್ತು ಬಡವರ ಏಳಿಗೆಗೆ ಪರ್ಯಾಯ ಪದವೇ ಆಗಿದೆ"

-ಅಮಿತ್‌ ಶಾ, ಕೇಂದ್ರ ಗೃಹಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.