ADVERTISEMENT

ನೆರೆ ರಾಷ್ಟ್ರಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆ ಗೌರವಿಸಿ: ಮೋದಿ

ಪಿಟಿಐ
Published 10 ನವೆಂಬರ್ 2020, 12:53 IST
Last Updated 10 ನವೆಂಬರ್ 2020, 12:53 IST
ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ) ಮಂಗಳವಾರ ಆಯೋಜಿಸಿದ್ದ ವರ್ಚುವಲ್‌ ಶೃಂಗ ಸಭೆಯಲ್ಲಿ ನರೇಂದ್ರ ಮೋದಿ ಮಾತನಾಡಿದರು –ಪಿಟಿಐ ಚಿತ್ರ
ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ) ಮಂಗಳವಾರ ಆಯೋಜಿಸಿದ್ದ ವರ್ಚುವಲ್‌ ಶೃಂಗ ಸಭೆಯಲ್ಲಿ ನರೇಂದ್ರ ಮೋದಿ ಮಾತನಾಡಿದರು –ಪಿಟಿಐ ಚಿತ್ರ   

ನವದೆಹಲಿ: ‘ಎಲ್ಲರೂ ನೆರೆ ರಾಷ್ಟ್ರಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪರಸ್ಪರ ಗೌರವಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಮೂಲಕ ಗಡಿ ತಕರಾರು ತೆಗೆದಿರುವ ಚೀನಾ ಹಾಗೂ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತಾಪಿಸಲು ಪ್ರಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಅವರು ಪರೋಕ್ಷವಾಗಿ ಕಠಿಣ ಸಂದೇಶ ರವಾನಿಸಿದ್ದಾರೆ.

ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ) ಮಂಗಳವಾರ ಆಯೋಜಿಸಿದ್ದ ವರ್ಚುವಲ್‌ ಶೃಂಗ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಮತ್ತು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅವರೂ ಪಾಲ್ಗೊಂಡಿದ್ದರು.

ನೆರೆಯ ರಾಷ್ಟ್ರಗಳೊಂದಿಗಿನ ಸಹಕಾರ ಬಲಪಡಿಸುವಲ್ಲಿ ಭಾರತದ ಪಾತ್ರದ ಕುರಿತು ಮಾತನಾಡಿದ ಮೋದಿ ‘ಸದಸ್ಯ ರಾಷ್ಟ್ರಗಳೊಂದಿಗಿನ ಸಂಪರ್ಕ ಮತ್ತು ಸಹಕಾರವನ್ನು ಬಲಪಡಿಸುವುದು ಅತಿ ಮುಖ್ಯ ಎಂಬುದನ್ನು ನಾವು ನಂಬಿದ್ದೇವೆ. ನೆರೆಯ ದೇಶಗಳ ಗಡಿ ಮತ್ತು ಸಾರ್ವಭೌಮತೆಯನ್ನೂ ಗೌರವಿಸುತ್ತೇವೆ’ ಎಂದರು.

‘ಎಸ್‌ಸಿಒನ ತತ್ವಗಳಿಗೆ ಬದ್ಧವಾಗಿ ಕೆಲಸ ಮಾಡಲು ನಾವು ಸದಾ ಸಿದ್ಧರಿದ್ದೇವೆ. ಆದರೆ ಕೆಲವರು ವಿನಾಕಾರಣ ದ್ವಿಪಕ್ಷೀಯ ಸಮಸ್ಯೆಗಳನ್ನು ಎಸ್‌ಸಿಒ ಕಾರ್ಯಸೂಚಿಯಲ್ಲಿ ಸೇರಿಸಲು ಪದೇ ಪದೇ ಪ್ರಯತ್ನಿಸುತ್ತಿರುವುದು ದುರದೃಷ್ಟಕರ. ಇದು ಎಸ್‌ಸಿಒ ನಿಯಮಾವಳಿಗೆ ವಿರುದ್ಧವಾದ ನಡೆಯಾಗಿದೆ’ ಎಂದು ಅವರು ಹೇಳಿದ್ದಾರೆ.

‘ಕೋವಿಡ್‌ ಲಸಿಕೆಯ ತಯಾರಿಕೆ ಮತ್ತು ಅಗತ್ಯವಿದ್ದವರಿಗೆ ಅದನ್ನು ವಿತರಿಸಲು ಭಾರತವು ಶಕ್ತಿಮೀರಿ ಪ್ರಯತ್ನಿಸಲಿದೆ. ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ನಾವು150ಕ್ಕೂ ಅಧಿಕ ರಾಷ್ಟ್ರಗಳಿಗೆ ಅಗತ್ಯ ಔಷಧಿಗಳನ್ನು ಸರಬರಾಜು ಮಾಡಿದ್ದೇವೆ’ ಎಂದೂ ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.