ADVERTISEMENT

ಬ್ಯಾರಿಕೇಡ್‌ ತೆರವು ನಮ್ಮ ನಿಲುವು ಸಮರ್ಥಿಸುತ್ತಿದೆ: ರೈತ ನಾಯಕರು

ಪಿಟಿಐ
Published 29 ಅಕ್ಟೋಬರ್ 2021, 12:41 IST
Last Updated 29 ಅಕ್ಟೋಬರ್ 2021, 12:41 IST
ರಾಕೇಶ್‌ ಟಿಕಾಯತ್‌
ರಾಕೇಶ್‌ ಟಿಕಾಯತ್‌   

ನವದೆಹಲಿ: ರೈತ ಪ್ರತಿಭಟನಾ ಸ್ಥಳಗಳಾದ ಟಿಕ್ರಿ ಮತ್ತು ಘಾಜಿಪುರದಲ್ಲಿ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಲು ದೆಹಲಿ ಪೊಲೀಸರು ಆರಂಭಿಸಿದ್ದು, ನಗರದ ಗಡಿ ಕೇಂದ್ರಗಳಲ್ಲಿ ರಸ್ತೆಗಳನ್ನು ಎಂದಿಗೂ ಸಂಚಾರಕ್ಕೆ ನಿರ್ಬಂಧಿಸಿರಲಿಲ್ಲ ಎಂಬ ನಮ್ಮ ನಿಲುವಿಗೆ ಈ ಕ್ರಮವು ಸಮರ್ಥಿಸುತ್ತದೆ ಎಂದು ರೈತ ನಾಯಕರು ಶುಕ್ರವಾರ ಹೇಳಿದ್ದಾರೆ.

ಕೋರ್ಟ್ ವಿಚಾರಣೆಯ ವೇಳೆ ನಗರದ ಗಡಿಯಲ್ಲಿ ರಸ್ತೆ ದಿಗ್ಬಂಧನಕ್ಕೆ ಪೊಲೀಸರೇ ಕಾರಣ ಎಂದು ರೈತ ಸಂಘಟನೆಗಳು ವಾದಿಸಿದ ನಂತರ ದೆಹಲಿ ಪೊಲೀಸರು ಬ್ಯಾರಿಕೇಡ್‌ ತೆರವುಗೊಳಿಸುವ ನಿರ್ಧಾರಕ್ಕೆ ಬಂದಿದೆ.

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಅಡಿ 40ಕ್ಕೂ ಹೆಚ್ಚು ರೈತ ಸಂಘಗಳು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ಸ್ಥಳಗಳಲ್ಲಿನ ಎರಡೂ ರಸ್ತೆಗಳನ್ನು ಮುಂದಿನ ದಿನಗಳಲ್ಲಿ ಸಂಪೂರ್ಣ ಸಂಚಾರ ಮುಕ್ತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ರೈತ ನಾಯಕರು ತಿಳಿಸಿದ್ದಾರೆ.

ADVERTISEMENT

‘ರಸ್ತೆಗಳನ್ನು ತಡೆಗಟ್ಟಿದವರು ರೈತರಲ್ಲ,ಪೊಲೀಸರು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಸ್ತೆಗಳನ್ನು ಮತ್ತೆ ಸಂಚಾರಕ್ಕೆ ತೆರೆಯಲಾಗುತ್ತಿದೆ’ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಪದಾಧಿಕಾರಿಗಳು ಹೇಳಿದರು.

‘ಮೂರು ಕೃಷಿ ಕಾನೂನುಗಳ ವಿರುದ್ಧ ಚಳವಳಿಯನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ರೈತರ ಪ್ರತಿಭಟನೆಯ ಭವಿಷ್ಯ ನಿರ್ಧರಿಸುತ್ತದೆ’ ಎಂದುಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದರು.

‘ರೈತರು ರಸ್ತೆಗಳನ್ನು ತಡೆಗಟ್ಟಿದ್ದಾರೆ ಎಂದು ರೈತರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ. ಈ ಆರೋಪವನ್ನು ನಾವು ಮೊದಲ ದಿನದಿಂದಲೇ ತಿರಸ್ಕರಿಸಿದ್ದೇವೆ. ಸಿಂಘು ಗಡಿಯಲ್ಲಿ, ಮೇಲ್ಸೇತುವೆ ನಿರ್ಮಾಣದ ಕಾರಣ ಈಗಾಗಲೇ ಸಂಚಾರಕ್ಕೆ ಮುಚ್ಚಿರುವ ರಸ್ತೆಯ ಭಾಗದಲ್ಲಿ ರೈತರು ಬೀಡುಬಿಟ್ಟಿದ್ದಾರೆ. ವಾಹನ ಸಂಚಾರಕ್ಕೆ ನಮ್ಮ ಕಡೆಯಿಂದ ಯಾವುದಾದರೂ ಅಡತಡೆ ಇದ್ದರೆ ಅದನ್ನು ತೆರವುಗೊಳಿಸುತ್ತೇವೆ’ ಎಂದುಹಿರಿಯ ರೈತ ನಾಯಕ ಎಸ್‌ಕೆಎಂ ಸದಸ್ಯ ದರ್ಶನ್‌ ಪಾಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.