ಪ್ರಧಾನಿ ಮೋದಿ
ನವದೆಹಲಿ: ಇಂದು ವಿಶ್ವ ವನ್ಯಜೀವಿ ದಿನ. ಈ ಸಂದರ್ಭದಲ್ಲಿ ಜೀವವೈವಿಧ್ಯತೆಯನ್ನು ಸಂರಕ್ಷಿಸುವಲ್ಲಿ ಭಾರತದ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, 'ಪ್ರತಿಯೊಂದು ಜೀವಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಮುಂದಿನ ಪೀಳಿಗೆಗಾಗಿ ಅವುಗಳನ್ನು ರಕ್ಷಿಸೋಣ. ವನ್ಯಜೀವಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಭಾರತದ ಕೊಡುಗೆಗಳ ಬಗ್ಗೆ ನಮಗೆ ಹೆಮ್ಮೆ ಇದೆ' ಎಂದು ಹೇಳಿದ್ದಾರೆ.
ವಿಶ್ವ ವನ್ಯಜೀವಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಸೋಮವಾರ) ಬೆಳಿಗ್ಗೆ ಗುಜರಾತ್‌ನ ಜುನಾಗಢ ಜಿಲ್ಲೆಯ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ.
ಮೂರು ದಿನಗಳ ಕಾಲ ತವರು ರಾಜ್ಯ ಗುಜರಾತ್ ಪ್ರವಾಸದಲ್ಲಿರುವ ಅವರು ಭಾನುವಾರ ಸಂಜೆ ಸೋಮನಾಥ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು. ಇಲ್ಲಿ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಶಿವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಬಳಿಕ ಸಸಾನ್‌ನಲ್ಲಿರುವ ರಾಜ್ಯ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುವ ಅರಣ್ಯ ಅತಿಥಿ ಗೃಹ ಸಿನ್ಹ್ ಸದನ್‌ನದಲ್ಲಿ ರಾತ್ರಿ ತಂಗಿದ್ದರು.
ಇಂದು ಬೆಳಿಗ್ಗೆ, ಕೆಲವು ಸಚಿವರು ಮತ್ತು ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಧಾನಿ ಸಫಾರಿಗೆ ತೆರಳಿದ್ದಾರೆ.
ಜಗತ್ತಿನ ವನ್ಯಜೀವಿಗಳು ಹಾಗೂ ಸಸ್ಯ ಸಂಪತ್ತಿನ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಮಾರ್ಚ್ 3ರಂದು 'ವಿಶ್ವ ವನ್ಯಜೀವಿ ದಿನ' ಆಚರಿಸಲಾಗುತ್ತಿದೆ.
2013ರ ಡಿಸೆಂಬರ್ 20ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್‌ಜಿಎ) 68ನೇ ಅಧಿವೇಶನದಲ್ಲಿ ವಿಶ್ವ ವನ್ಯಜೀವಿ ದಿನದ ಆಚರಣೆಯ ಬಗ್ಗೆ ಘೋಷಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.