ADVERTISEMENT

ಪಶ್ಚಿಮ ಬಂಗಾಳಕ್ಕೂ ಟ್ರ್ಯಾಕ್ಟರ್‌ಗಳನ್ನು ಕೊಂಡೊಯ್ಯುತ್ತೇವೆ: ರಾಖೇಶ್‌ ಟಿಕಾಯತ್

ಏಜೆನ್ಸೀಸ್
Published 18 ಫೆಬ್ರುವರಿ 2021, 13:07 IST
Last Updated 18 ಫೆಬ್ರುವರಿ 2021, 13:07 IST
ರಾಕೇಶ್‌ ಟಿಕಾಯತ್‌
ರಾಕೇಶ್‌ ಟಿಕಾಯತ್‌   

ಚಂಡೀಗಡ: ಕೃಷಿ ಋತುವಿನ ಆರಂಭದೊಂದಿಗೆ ರೈತರ ಪ್ರತಿಭಟನೆ ಕೊನೆಗೊಳ್ಳಲಿದೆ ಎಂಬ ತಪ್ಪು ಕಲ್ಪನೆಯಲ್ಲಿ ಸರ್ಕಾರ ಇರಬಾರದು ಎಂದು ರೈತ ನಾಯಕ ರಾಕೇಶ್‌ ಟಿಕಾಯತ್‌ ಎಚ್ಚರಿಕೆ ನೀಡಿದ್ದಾರೆ.

ಹರಿಯಾಣದ ಖರಕ್‌ ಪುನಿಯಾದಲ್ಲಿ ನಡೆದ ರೈತರ ಮಹಾಪಂಚಾಯತ್‌ನಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, 'ಕೃಷಿ ಋತುವಿನ ಆರಂಭದೊಂದಿಗೆ ರೈತರ ಪ್ರತಿಭಟನೆ ಕೊನೆಗೊಳ್ಳಲಿದೆ ಎಂಬ ತಪ್ಪು ಕಲ್ಪನೆಯಲ್ಲಿ ಸರ್ಕಾರ ಇರಬಾರದು. ನಾವು ಕೊಯ್ಲು ಮಾಡುವುದರ ಜೊತೆಗೆ ಪ್ರತಿಭಟನೆಯನ್ನೂ ಮಾಡುತ್ತೇವೆ. ರೈತರ ಪ್ರತಿಭಟನೆಯೂ ಮುಂದಿನ ಎರಡು ತಿಂಗಳುಗಳಲ್ಲಿ ಕೊನೆಗೊಳ್ಳಲಿದೆ ಎಂಬುದಾಗಿ ಸರ್ಕಾರ ಭಾವಿಸಬಾರದು' ಎಂದು ಹೇಳಿದ್ದಾರೆ.

'ಬೆಳೆಗಳ ಬೆಲೆಯನ್ನು ಹೆಚ್ಚಿಸಲಾಗಿಲ್ಲ. ಆದರೆ, ಇಂಧನ ಬೆಲೆ ಏರಿಕೆಯಾಗಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೂಡ ಸಿಗುತ್ತಿಲ್ಲ. ಕೇಂದ್ರವು ಸಹಕರಿಸದೇ ಹೋದರೆ, ನಾವು ನಮ್ಮ ಟ್ರ್ಯಾಕ್ಟರ್‌ಗಳನ್ನು ಪಶ್ಚಿಮ ಬಂಗಾಳಕ್ಕೂ ಕೊಂಡೊಯ್ಯುತ್ತೇವೆ' ಎಂದು ಟಿಕಾಯತ್‌ ತಿಳಿಸಿದ್ದಾರೆ.

ADVERTISEMENT

ಕಳೆದ ವರ್ಷ ನವೆಂಬರ್ 26ರಿಂದ ಆರಂಭವಾಗಿರುವ ಪ್ರತಿಭಟನೆಯನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ಮುನ್ನಡೆಸುತ್ತಿದ್ದಾರೆ. ಈ ನಡುವೆ ಜನವರಿ 26ರ ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಹಿಂಸಾಚಾರ ನಡೆದಿತ್ತು.

ಏತನ್ಮಧ್ಯೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿರುವ ರೈತ ಸಂಘಟನೆಗಳು ದೇಶವ್ಯಾಪಿಯಾಗಿ ಮಹಾ ಪಂಚಾಯಿತಿಗಳನ್ನು ಆಯೋಜಿಸುತ್ತಿದ್ದು, ಹೆಚ್ಚಿನ ಸಂಖ್ಯೆಯ ರೈತರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.