ADVERTISEMENT

ತಮಿಳುನಾಡು: ಮುಚ್ಚಿದ ದೇಗುಲದ ಎದುರೇ ವಿವಾಹ ಬಂಧನಕ್ಕೆ ಒಳಗಾದ 91 ಜೋಡಿ!

ಪಿಟಿಐ
Published 24 ಜನವರಿ 2022, 14:47 IST
Last Updated 24 ಜನವರಿ 2022, 14:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಡಲೂರು, ತಮಿಳುನಾಡು (ಪಿಟಿಐ): ಕೋವಿಡ್ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನ್‌ ನಡುವೆಯೂ ಇಲ್ಲಿನ ತಿರುವಂತಿಪುರಂ ಶ್ರೀ ದೇವನಾಥಸ್ವಾಮಿ ದೇಗುಲದ ಹೊರಗೆ 91 ಜೋಡಿ ಭಾನುವಾರ ದಾಂಪತ್ಯ ಬದುಕಿಗೆ ಕಾಲಿಟ್ಟವು. ತಮಿಳು ಸಂಪ್ರದಾಯದಂತೆ ಈ ತಿಂಗಳು (ತಾಯ್‌) ಶುಭಕರ ಮಾಸವಾಗಿದೆ.

ನವಜೋಡಿಗಳಿಗೆ ಅರ್ಚಕರು ದೇಗುಲದ ಹೊರಗಿನ ರಸ್ತೆಯಲ್ಲಿಯೇ ವಿವಾಹ ನಡೆಸಿಕೊಟ್ಟರು ಎಂದು ದೇಗುಲದ ಆಡಳಿತ ಮಂಡಳಿ ಅಧಿಕಾರಿ ಎ.ವೀರಬತೀರನ್‌ ಮತ್ತು ಕಾರ್ಯದರ್ಶಿ ರತೀನಾ ಸಭಾಪತಿ ಅವರು ತಿಳಿಸಿದರು.

ಶುಭ ಮುಹೂರ್ತವಿದ್ದ ಕಾರಣ 110 ಜೋಡಿ ಮದುವೆಗೆ ನೋಂದಣಿ ಮಾಡಿಸಿದ್ದರು. ಬೆಳಿಗ್ಗೆ 4.30ರಿಂದ 11ರ ನಡುವಿನ ಅವಧಿಯಲ್ಲಿ ವಿವಾಹ ನೆರವೇರಿತು. ವಿಷ್ಣುವಿನ ಈ ದೇವಸ್ಥಾನದಲ್ಲಿ ಮದುವೆಯಾದರೆ ಒಳ್ಳೆಯದು ಎಂಬ ನಂಬಿಕೆಯಿದೆ. ವಿವಿಧ ಭಾಗಗಳ ಜನರು ಬಂದು ಇಲ್ಲಿ ಮದುವೆಯಾಗುತ್ತಾರೆ.

ADVERTISEMENT

ದೇಗುಲದ ಸಭಾಂಗಣದಲ್ಲಿ ಒಟ್ಟಿಗೆ 40 ಜೋಡಿ ವಿವಾಹವಾಗಲು ಅವಕಾಶವಿದೆ. ದೇಗುಲ ತೆರೆದಿರುವ ಸಾಮಾನ್ಯ ದಿನಗಳಲ್ಲಿ ಮದುವೆಯಾಗುವ ಜೋಡಿಗಳಿಗೆ ಯಾವುದೇ ಮಿತಿ ಇಲ್ಲ.

ತಮಿಳುನಾಡಿನಲ್ಲಿ ಹೊಸದಾಗಿ 30,850 ಪ್ರಕರಣ ದೃಢಪಟ್ಟಿವೆ. ನಿಯಂತ್ರಣ ಕ್ರಮವಾಗಿ ಸರ್ಕಾರ ವಾರಾಂತ್ಯ ಲಾಕ್‌ಡೌನ್‌ ಅನ್ನು ಜಾರಿಗೊಳಿಸಿದೆ. ಹೀಗಾಗಿ ಭಾನುವಾರ ದೇಗುಲವನ್ನು ಬಂದ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.