ADVERTISEMENT

ವಾರದ ಹಿಂದೆ ಆರಂಭವಾದ ಕೋವಿಡ್‌ ಆರೈಕೆ ಕೇಂದ್ರದಲ್ಲೂ ಆಮ್ಲಜನಕ, ಸೌಲಭ್ಯ ಕೊರತೆ

ಪಿಟಿಐ
Published 4 ಮೇ 2021, 11:53 IST
Last Updated 4 ಮೇ 2021, 11:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌ ಪ್ರಕರಣಗಳನ್ನು ನಿಭಾಯಿಸಲು ವಾರದ ಹಿಂದೆ ಇಂಡೊ–ಟಿಬೆಟನ್‌ ಬಾರ್ಡರ್‌ ಪೊಲೀಸ್ (ಐಟಿಬಿಪಿ) ಇಲ್ಲಿ ಆರಂಭಿಸಿದ್ದ 500 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರದಲ್ಲಿಯೂ ಆಮ್ಲಜನಕ ಮತ್ತು ಔಷಧಗಳ ಕೊರತೆ ಎದುರಾಗಿದೆ. ಕೇವಲ 350 ಹಾಸಿಗೆಗಳಷ್ಟೇ ಬಳಕೆಯಾಗುತ್ತಿವೆ.

ರಾಜಧಾನಿಯಲ್ಲಿ ಎದುರಾಗಿರುವ ಕೊರೊನಾ ಎರಡನೇ ಅಲೆಯು ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಬೀರಿದ್ದು, ಅನೇಕ ರಾಜ್ಯಗಳಲ್ಲಿ ಆಮ್ಲಜನಕ, ಔಷಧ, ಚಿಕಿತ್ಸಾ ಪರಿಕರಗಳ ಕೊರತೆ ಎದುರಾಗಿದೆ.

ಇಲ್ಲಿನ ಸರ್ದಾರ್ ಪಟೇಲ್‌ ಕೋವಿಡ್ ಆರೈಕೆ ಕೇಂದ್ರದಲ್ಲಿ 500 ಹಾಸಿಗೆಗಳ ಪೈಕಿ ಆಮ್ಲಜನಕ ಸೌಲಭ್ಯವುಳ್ಳ 350 ಹಾಸಿಗೆಗಳು ಬಳಕೆ ಆಗುತ್ತಿವೆ.ದಕ್ಷಿಣ ದೆಹಲಿಯ ಚತ್ತಾಪುರ ವಲಯಕ್ಕೆ 6.5 ಮೆಟ್ರಿಕ್ ಟನ್‌ ಮಂಜೂರಾಗಿದ್ದರೆ, ಕೇವಲ 2.99 ಮೆಟ್ರಿಕ್‌ ಟನ್‌ ಆಮ್ಲಜನಕವಷ್ಟೇ ಪೂರೈಕೆ ಆಗುತ್ತಿದೆ. ಐಟಿಬಿಪಿ ನಿರ್ವಹಣೆ ಮಾಡುತ್ತಿದ್ದು, ರಾಧಾಸೊಯಾಮಿ ಬೀಸ್‌ನಲ್ಲಿ ದೆಹಲಿ ಸರ್ಕಾರದ ಮನವಿ ಮೇರೆಗೆ ಆರಂಭಿಸಿತ್ತು.

ADVERTISEMENT

ಕಳೆದ ವಾರ ಎಸ್‌ಪಿಸಿಸಿಗೆ ಒಟ್ಟು 720 ಕೋವಿಡ್‌ ರೋಗಿಗಳು ದಾಖಲಾಗಿದ್ದರು. ಇಲ್ಲಿ, ನಿಗಾ ಘಟಕ, ವೆಂಟಿಲೇಟರ್‌ ಹಾಸಿಗೆ ಸೌಲಭ್ಯಗಳಿಲ್ಲ. ಈ ಪೈಕಿ 320 ರೋಗಿಗಳನ್ನು ವೈದ್ಯಕೀಯ ಸಲಹೆ ಇಲ್ಲದೇ ಅಥವಾ ಮನವಿ ಮೇರೆಗೆ ಮನೆಗೆ ಕಳುಹಿಸಲಾಗಿದೆ. 57 ರೋಗಿಗಳನ್ನು ಗಂಭೀರ ಪ್ರಕರಣ ನಿಭಾಯಿಸಬಹುದಾದ ಇತರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗಿದೆ. ಕೇಂದ್ರದಲ್ಲಿ ಈವರೆಗೆ 50 ಮಂದಿ ಮೃತಪಟ್ಟಿದ್ದಾರೆ.

ಕೇಂದ್ರಕ್ಕೆ ಮಂಜೂರಾದ ಆಮ್ಲಜನಕವನ್ನು ಒದಗಿಸಿದರೆ ಎಲ್ಲ 500 ಹಾಸಿಗೆಗಳನ್ನು ಬಳಸುವುದು ಶಕ್ತವಾಗಲಿದೆ ಎಂದು ನಾವು ಆಗಲೇ ದೆಹಲಿ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.