ಠಾಣೆ: ‘ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ಸಿದ್ಧಾಂತವನ್ನು ತ್ಯಜಿಸುವ ಮೂಲಕ ಜನರನ್ನು ವಂಚಿಸಿದವರ ಪಾಪ ಪರಿಹಾರಕ್ಕಾಗಿ ನಾನು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದೆ’ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದರು.
ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೀಗೆ ತಿರುಗೇಟು ನೀಡಿದರು.
‘ಗಂಗಾ ನದಿಯಲ್ಲಿ ಮಿಂದೆದ್ದ ಮಾತ್ರಕ್ಕೆ ಮಹಾರಾಷ್ಟ್ರಕ್ಕೆ ವಂಚನೆ ಮಾಡಿರುವ ಪಾಪ ಪರಿಹಾರವಾಗುವುದಿಲ್ಲ’ ಎಂದು ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಈ ಹೇಳಿಕೆ ನೀಡಿದರು.
ಸಂತ ರವಿದಾಸ ಮಹಾರಾಜ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಂಭ ಮೇಳದಲ್ಲಿ 65 ಕೋಟಿ ಭಕ್ತರು ಪಾಲ್ಗೊಂಡು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ‘ಪಾಪ ಪರಿಹರಿಸಿಕೊಳ್ಳಲು ಕುಂಭಮೇಳಕ್ಕೆ ತೆರಳಲಿ’ ಎಂದು ಉದ್ಧವ್ ಹೇಳಿದ್ದಾರೆ. ಆದರೆ ಆಧ್ಯಾತ್ಮಿಕ ದರ್ಶನಕ್ಕಾಗಿ ನಾನು ಅಲ್ಲಿಗೆ ತೆರಳಿದ್ದೆ ಮತ್ತು ಬಾಳಾ ಸಾಹೇಬ್ ಅವರಿಗೆ ದ್ರೋಹ ಬಗೆದವರ ಪಾಪ ಪರಿಹಾರಕ್ಕಾಗಿ ಪವಿತ್ರ ಸ್ನಾನ ಮಾಡಿದೆ’ ಎಂದು ಹೇಳಿದರು.
‘ಅವರು (ಉದ್ಧವ್ ಠಾಕ್ರೆ) ತಮ್ಮ ಪಾಪಗಳನ್ನು ಮುಚ್ಚಿಡಲು ಲಂಡನ್‌ಗೆ ತೆರಳುತ್ತಾರೆ. ಮಹಾಕುಂಭವನ್ನೂ ಅವರು ಅವಮಾನಿಸುತ್ತಿದ್ದಾರೆ. ತಮ್ಮ ಸುತ್ತ ಒಳ್ಳೆಯದು ನಡೆಯುವುದನ್ನು ಅವರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.