ADVERTISEMENT

ಪಶ್ಚಿಮ ಬಂಗಾಳದಲ್ಲಿ ಕೋಮು ಕಲಹ ಸೃಷ್ಟಿಸಲು ಬಿಜೆಪಿ ಯತ್ನ: ಮಮತಾ ಆರೋಪ

ಏಜೆನ್ಸೀಸ್
Published 3 ಏಪ್ರಿಲ್ 2021, 11:35 IST
Last Updated 3 ಏಪ್ರಿಲ್ 2021, 11:35 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಕೋಮು ಕಲಹ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಅವರು, 'ಹೈದರಾಬಾದ್‌ ಮೂಲದ ಪಕ್ಷವೊಂದು ಪಶ್ಚಿಮ ಬಂಗಾಳದಲ್ಲಿ ಮತಗಳನ್ನು ಧ್ರುವೀಕರಣ ಮಾಡಲು ಹೊರಟಿದೆ. ಮುಸ್ಲಿಂ ಸಹೋದರರು ಈ ಬಗ್ಗೆ ಎಚ್ಚರದಿಂದ ಇರಬೇಕಿದೆ' ಎಂದು ಅಸಾದುದ್ದೀನ್ ಓವೈಸಿ ನೇತೃತ್ವದ ಎಐಐಎಂಐಎಂ ಪಕ್ಷದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಕೋಮು ಸಂಘರ್ಷಗಳನ್ನು ಪ್ರಚೋದಿಸುವ ಬಿಜೆಪಿಯ ಪ್ರಯತ್ನಗಳ ವಿರುದ್ಧ ಹಿಂದೂಗಳು ಒಂದಾಗಬೇಕು ಎಂದು ಮಮತಾ ಕರೆ ನೀಡಿದ್ದಾರೆ.

ADVERTISEMENT

'ಚುನಾವಣೆಯಲ್ಲಿ ಜಯ ಸಾಧಿಸುವುದಕ್ಕೋಸ್ಕರ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಕೋಮು ಕಲಹಗಳನ್ನು ಹುಟ್ಟುಹಾಕಲು ಯತ್ನಿಸುತ್ತಿದೆ' ಎಂದು ಇದೇ ವೇಳೆ ಅವರು ಆರೋಪಿಸಿದ್ದಾರೆ.

'ಪ್ರತಿದಿನ ಮನೆಯಿಂದ ಹೊರಡುವ ಮೊದಲು ಚಂಡಿ ಮಂತ್ರವನ್ನು ಪಠಿಸುವ ನಾನು ಧರ್ಮನಿಷ್ಠ ಹಿಂದೂವಾಗಿದ್ದೇನೆ. ಆದರೆ, ಪ್ರತಿ ಧರ್ಮಕ್ಕೂ ಗೌರವ ನೀಡುವ ಸಂಪ್ರದಾಯದಲ್ಲಿ ನನಗೆ ನಂಬಿಕೆ ಇದೆ' ಎಂದು ಮಮತಾ ಹೇಳಿದ್ದಾರೆ.

ಬಿಜೆಪಿ ನಾಯಕರ ದಲಿತ ಮನೆಗಳ ಭೇಟಿ ವಿರುದ್ಧ ಹರಿಹಾಯ್ದಿರುವ ಅವರು, 'ನಾನೊಬ್ಬ ಬ್ರಾಹ್ಮಣ ಮಹಿಳೆ. ಆದರೆ, ನನ್ನ ಎಲ್ಲ ವೈಯಕ್ತಿಕ ಅಗತ್ಯಗಳನ್ನು ನೋಡಿಕೊಳ್ಳುವುದು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ. ಅವಳು ನನಗೆ ಆಹಾರವನ್ನು ಸಹ ತಯಾರು ಮಾಡುತ್ತಾಳೆ' ಎಂದು ಹೇಳಿದ್ದಾರೆ.

'ದಲಿತರ ಮನೆಯ ಅಂಗಳದಲ್ಲಿ ಕುಳಿತು ತಿನ್ನಲು ಪಂಚತಾರಾ ಹೋಟೆಲ್‌ಗಳಿಂದ ಊಟ ತರುವವರು ದಲಿತ ವಿರೋಧಿಗಳು. ಅವರು ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತರ ವಿರೋಧಿಗಳಾಗಿರುವುದರಿಂದ ನಾನು ಇದನ್ನು ಒತ್ತಿ ಹೇಳಬೇಕಾಗಿಲ್ಲ' ಎಂದು ಬಿಜೆಪಿ ಮುಖಂಡರ ವಿರುದ್ಧ ಮಮತಾ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.