ADVERTISEMENT

ಪೌರತ್ವ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದ ನಾಲ್ಕನೇ ರಾಜ್ಯ ಪಶ್ಚಿಮ ಬಂಗಾಳ

ಏಜೆನ್ಸೀಸ್
Published 27 ಜನವರಿ 2020, 12:15 IST
Last Updated 27 ಜನವರಿ 2020, 12:15 IST
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ನವದೆಹಲಿ: ಕೇರಳ, ಪಂಜಾಬ್ ಮತ್ತು ರಾಜಸ್ಥಾನಗಳ ನಂತರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು 2019ರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸೋಮವಾರ ನಿರ್ಣಯ ಅಂಗೀಕರಿಸಲಾಯಿತು. ಈ ಮೂಲಕ ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ನಾಲ್ಕನೇ ರಾಜ್ಯವಾಗಿ ಪಶ್ಚಿಮ ಬಂಗಾಳ ಹೊರಹೊಮ್ಮಿದೆ.

ಈ ಪ್ರತಿಭಟನೆಯು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರವಲ್ಲದೆ ಎಲ್ಲರಿಗೂ ಆಗಿದೆ. ಈ ಪ್ರತಿಭಟನೆಯನ್ನು ಮುನ್ನಡೆಸಿದ್ದಕ್ಕಾಗಿ ಹಿಂದು ಸೋದರರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪಶ್ಚಿಮ ಬಂಗಾಳದಲ್ಲಿ ನಾವು ಸಿಎಎ, ಎನ್‌ಪಿಆರ್ ಮತ್ತು ಎನ್ಆರ್‌ಸಿಗಳಿಗೆ ಅನುಮತಿ ನೀಡುವುದಿಲ್ಲ. ಇವುಗಳ ವಿರುದ್ಧ ನಾವು ಶಾಂತಿಯುತವಾಗಿಯೇ ಹೋರಾಡುತ್ತೇವೆ ಎಂದು ಸಿಎಂ ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ತಿಳಿಸಿದರು.

ADVERTISEMENT

ಬಿಜೆಪಿಯೇತರ ಆಡಳಿತವಿರುವ ರಾಜಸ್ಥಾನ, ಕೇರಳ ಮತ್ತು ಪಂಜಾಬ್ ರಾಜ್ಯಗಳಲ್ಲಿ ಈಗಾಗಲೇ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರ್ಣಯ ಅಂಗೀಕರಿಸಲಾಗಿದೆ.

ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾನೂನಿಗೆ ತಡೆ ನೀಡಲು ಕಳೆದ ವಾರ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಕೇಂದ್ರ ಸರ್ಕಾರದ ವಾದವನ್ನು ಆಲಿಸದೆಯೇ ಈ ವಿಚಾರದಲ್ಲಿ ಯಾವುದೇ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದ ಕೋರ್ಟ್, ಈ ಕುರಿತಾಗಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ನಾಲ್ಕು ವಾರಗಳ ಗಡುವನ್ನು ನೀಡಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ, 2014ರ ಡಿಸೆಂಬರ್ 14ಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಧಾರ್ಮಿಕ ಕಾರಣಗಳಿಂದದೌರ್ಜನ್ಯಕ್ಕೊಳಗಾಗಿ ಬಂದಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವವನ್ನು ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.