ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)
ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳು ಭಾರಲೋಹದಿಂದ (ಆರ್ಸೆನಿಕ್) ಅಂತರ್ಜಲ ಕಲುಷಿತಗೊಂಡಿರುವ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಿವೆ ಎನ್ನುವ ಮಾಹಿತಿಯನ್ನು ಕೇಂದ್ರ ಸರ್ಕಾರವು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ನೀಡಿದೆ.
ನೀರು ಮತ್ತು ಮಣ್ಣಿನಲ್ಲಿರುವ ವಿಷಕಾರಿ ಭಾರ ಲೋಹದ ಅಂಶವನ್ನು ಹೆಚ್ಚು ಹೀರಿಕೊಳ್ಳುವುದರಿಂದ ಭತ್ತವು ಆರ್ಸೆನಿಕ್ ಮಾಲಿನ್ಯಕ್ಕೆ ಒಳಗಾಗುತ್ತಿದೆ ಎಂಬ ಅರ್ಜಿ ವಿಚಾರಣೆ ನಡೆಸುತ್ತಿರುವ ಎನ್‌ಜಿಟಿ, ಈ ಸಂಬಂಧ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿತ್ತು.
ಎನ್‌ಜಿಟಿ ಅಧ್ಯಕ್ಷರಾದ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಎ. ಸೆಂಥಿಲ್ ವೇಲ್ ಅವರಿದ್ದ ಪೀಠವು ಡಿ.16ರಂದು ಹೊರಡಿಸಿದ್ದ ಆದೇಶದಲ್ಲಿ, ಈ ಸಮಸ್ಯೆಗೆ ಸಂಬಂಧಿಸಿ ಅಗತ್ಯ ಮಾಹಿತಿ ನೀಡುವಂತೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಗೆ (ಐಸಿಎಆರ್) ಕೇಳಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಈ ಎರಡು ರಾಜ್ಯಗಳಲ್ಲಿ ಆರ್ಸೆನಿಕ್ ಸೇರ್ಪಡೆಯಿಂದ ಅಂತರ್ಜಲ ಕಲುಷಿತಗೊಂಡಿರುವ ಮಾಹಿತಿಯನ್ನು ನೀಡಿದೆ.
‘ಅಂತರ್ಜಲವು ಆರ್ಸೆನಿಕ್‌ನಿಂದ ಕಲುಷಿತಗೊಂಡಿರುವ ಸಮಸ್ಯೆಯನ್ನು ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳು ಹೆಚ್ಚು ಎದುರಿಸುತ್ತಿವೆ. ಇಲ್ಲಿ ಅಂತರ್ಜಲ ಬಳಸಿಕೊಂಡು ಕೃಷಿ ಮಾಡುವುದರಿಂದ ಅದು ಕೃಷಿ ಮಣ್ಣನ್ನು ಸೇರಿ, ಆ ಮೂಲಕ ಆಹಾರ ಸರಪಳಿಗೂ ಪ್ರವೇಶಿಸುತ್ತಿದೆ’ ಎಂದು ಕೇಂದ್ರ ಸರ್ಕಾರವು ಎನ್‌ಜಿಟಿಗೆ ಸಲ್ಲಿಸಿರುವ ಲಿಖಿತ ಉತ್ತರದಲ್ಲಿ ಹೇಳಿದೆ.
ಆರ್ಸೆನಿಕ್ ಮಾಲಿನ್ಯದಿಂದ ಆಹಾರ ಪದಾರ್ಥಗಳ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ತರಕಾರಿ ಬೆಳೆಗಳಾದ ಬೀಟ್ ರೂಟ್, ಮೂಲಂಗಿ ಇತ್ಯಾದಿ ಹಾಗೂ ನೀರು ಅವಶ್ಯವಾಗಿ ಬೇಡುವ ಭತ್ತದಲ್ಲಿ (ಅಕ್ಕಿ) ವಿಷಕಾರಿ ಆರ್ಸೆನಿಕ್ ಅಂಶ ಇರುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರವು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಪೀಠವು, ಈ ಅರ್ಜಿಯಲ್ಲಿ ಐಸಿಎಆರ್ ಅನ್ನು ಪ್ರತಿವಾದಿಯನ್ನಾಗಿಸುವಂತೆ ಸೂಚಿಸಿ, ವಿಚಾರಣೆಯನ್ನು ಬರುವ ಏಪ್ರಿಲ್ 15ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.