ADVERTISEMENT

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಯಿಂದ ಬಿಡುಗಡೆ

ಏಜೆನ್ಸೀಸ್
Published 12 ಮಾರ್ಚ್ 2021, 21:12 IST
Last Updated 12 ಮಾರ್ಚ್ 2021, 21:12 IST
ಆಸ್ಪತ್ರೆಯಿಂದ ಬಿಡುಗಡೆಯಾದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಆಸ್ಪತ್ರೆಯಿಂದ ಬಿಡುಗಡೆಯಾದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಅಪರಿಚಿತರು ತಳ್ಳಿದ ಪರಿಣಾಮ ಕಾಲಿಗೆ ಗಾಯವಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಸಂಜೆ ಬಿಡುಗಡೆಯಾಗಿದ್ದಾರೆ.

ಈ ಕುರಿತು ಎಸ್‌ಎಸ್‌ಕೆಎಂ ಆಸ್ಪತ್ರೆಯ ವೈದ್ಯರ ತಂಡ ಮಾಹಿತಿ ನೀಡಿದೆ. ಸಿಎಂ ಮಮತಾ ಬ್ಯಾನರ್ಜಿ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.

ಮಮತಾ ಬ್ಯಾನರ್ಜಿ ಅವರ ಪುನರಾವರ್ತಿತ ವಿನಂತಿಯ ಮೇರೆಗೆ ನಿರ್ದಿಷ್ಟ ಸೂಚನೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಏಳು ದಿನಗಳ ಬಳಿಕ ವೈದ್ಯಕೀಯ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ವೀಲ್ ಚೇರ್ ಮುಖಾಂತರವೇ ಮಮತಾ ಬ್ಯಾನರ್ಜಿ ಅವರನ್ನು ಆಸ್ಪತ್ರೆಯಿಂದ ಹೊರ ಕರೆ ತರಲಾಯಿತು. ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಕೈ ಮುಗಿದರು.

ನಂದಿಗ್ರಾಮದಲ್ಲಿ ಪ್ರಚಾರದ ವೇಳೆ ಮಮತಾ ಬ್ಯಾನರ್ಜಿ ಮೇಲೆ ಅಪರಿಚಿತರು ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಶುಕ್ರವಾರದ ಬೆಳವಣಿಗೆ...

*ಪಶ್ಚಿಮ ಬಂಗಾಳದಲ್ಲಿ ಕಿಸಾನ್ ಸಂಯುಕ್ತ ಮೋರ್ಚಾದ ನಾಯಕರು ಮತ್ತು ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಪ್ರಚಾರ ನಡೆಸಿದರು. ಬಿಜೆಪಿಗೆ ಮತ ನೀಡದಂತೆ ಜನರಲ್ಲಿ ಮನವಿ ಮಾಡಿಕೊಂಡರು

*ಕಲ್ಲಿದ್ದಲು ಕಳ್ಳತನ ಮತ್ತು ಕಳ್ಳಸಾಗಣೆ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಸಂಬಂಧಿಗೆ ಸಿಬಿಐ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ. ಅಭಿಷೇಕ್ ಅವರ ಬಾವಮೈದುನ ಅನೂಪ್ ಮಾಂಝಿಗೆ ಸಿಬಿಐ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ

* ಕೇರಳದಲ್ಲಿ 25 ವರ್ಷಗಳ ಬಳಿಕ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಮಹಿಳೆಯೊಬ್ಬರಿಗೆ ಟಿಕೆಟ್‌ ನೀಡಿದೆ. ನೂರ್‌ಬೀನ್‌ ರಷೀದಾ ಅವರು ಕೋಯಿಕ್ಕೋಡ್‌ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ

*‘ಕೇರಳದಲ್ಲಿ ಕಾಂಗ್ರೆಸ್‌ ಪಕ್ಷವು ಬಿಜೆಪಿಯ ನಿಶ್ಚಿತ ಠೇವಣಿಯಂತಾಗಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಟೀಕಿಸಿದ್ದಾರೆ. ‘40 ಸ್ಥಾನಗಳನ್ನು ಗೆದ್ದರೆ ಬಿಜೆಪಿ ಕೇರಳದಲ್ಲಿ ಸರ್ಕಾರ ರಚಿಸಲಿದೆ’ ಎಂಬ ಬಿಜೆಪಿ ಮುಖಂಡ ಕೆ. ಸುರೇಂದ್ರನ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, ‘ಚುನಾವಣೆಯ ನಂತರ ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿ ಸೇರಲಿದ್ದಾರೆ’ ಎಂದಿದ್ದಾರೆ

* ಪಶ್ಚಿಮ ಬಂಗಾಳದಲ್ಲಿ ಮಾ.27ರಂದು ಮೊದಲ ಹಂತದ ಚುನಾವಣೆ ಎದುರಿಸಲಿರುವ ಕ್ಷೇತ್ರಗಳಲ್ಲಿ ನಾಲ್ಕು ಕಡೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಸಂಯುಕ್ತ ಜನತಾ ದಳಕ್ಕೆ, ಮತದಾನಕ್ಕೂ ಮುನ್ನವೇ ಹಿನ್ನಡೆಯಾಗಿದೆ. ನಾಲ್ಕರಲ್ಲಿ ಮೂವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ

*ಕಾಂಗ್ರೆಸ್‌ ಪಕ್ಷವು ಪಶ್ಚಿಮ ಬಂಗಾಳಕ್ಕೆ ತನ್ನ ತಾರಾ ಪ್ರಚಾರಕರ ಪಟ್ಟಿಯನ್ನು ಪ್ರಕಟಿಸಿದೆ. ನಾಯಕತ್ವ ಬದಲಾಗಬೇಕು ಎಂದು ಕೋರಿದ್ದ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಕಪಿಲ್‌ ಸಿಬಲ್‌, ಗುಲಾಂ ನಬಿ ಆಜಾದ್‌, ಆನಂದ್‌ ಶರ್ಮಾ ಮುಂತಾದವರನ್ನು ಕೈಬಿಡಲಾಗಿದೆ. ಮನಮೋಹನ ಸಿಂಗ್‌, ನವಜೋತ್‌ಸಿಂಗ್‌ ಸಿಧು, ಸಚಿನ್‌ ಪೈಲಟ್‌ ಮುಂತಾದವರ ಹೆಸರು ಪಟ್ಟಿಯಲ್ಲಿದೆ.

ಕಾರಿನ ಬಳಿ ನಾಲ್ಕೈದು ಮಂದಿ ತಳ್ಳಿ ಹಾಕಿದ ಪರಿಣಾಮ ಎಡಗಾಲಿಗೆ ಗಂಭೀರ ಗಾಯವಾಗಿತ್ತು. ನಡೆದಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಮಮತಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಬಳಿಕ ಹೇಳಿಕೆ ಕೊಟ್ಟಿರುವ ಮಮತಾ ಬ್ಯಾನರ್ಜಿ, ಬೆಂಬಲಿಗರಲ್ಲಿ ಶಾಂತಿ ಕಾಪಾಡುವಂತೆ ಕರೆ ನೀಡಿದ್ದರು. ಅಲ್ಲದೆ ಒಂದೆರಡು ದಿನಗಳಲ್ಲಿ ಪ್ರಚಾರಕ್ಕೆ ಹಿಂತಿರುಗಲಿದ್ದು, ಅಗತ್ಯವಿದ್ದರೆ ವೀಲ್ ಚೇರ್ ಬಳಕೆ ಮಾಡುವುದಾಗಿ ಘೋಷಿಸಿದ್ದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲಿನ ದಾಳಿಯು ಟಿಎಂಸಿ ಹಾಗೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಜಟಾಪಟಿಗೆ ಕಾರಣವಾಗಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.